ಬಂಟ್ವಾಳ, ಅ 01 (DaijiworldNews/AK):ಮಂಗಳೂರು-ಧರ್ಮಸ್ಥಳ ಕ್ಕೆ ತೆರಳುವವರ ಪ್ರಯಾಣಿಕರ ಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಮಂಗಳೂರು ವಿಭಾಗವು ಮುಂದಿನ 10 ದಿನಗಳಲ್ಲಿ ಹೆಚ್ಚುವರಿ ಶಟಲ್ ಬಸ್ಸುಗಳನ್ನು ಓಡಿಸಲು ಚಿಂತನೆ ನಡೆಸಿದೆ.
ಕಳೆದ ಹಲವು ದಿನಗಳಿಂದ ಮಂಗಳೂರು-ಧರ್ಮಸ್ಥಳ ಮಧ್ಯೆ ಓಡಾಡುವ ಕೆಎಸ್ಟಿಸಿ ಬಸ್ ಪ್ರಯಾಣಿಕರ ಸಂಖ್ಯೆ ವಿಪರೀತ ಹೆಚ್ಚಳದಿಂದ ಬಸ್ಸುಗಳು ಹೌಸ್ ಫುಲ್ ಆಗುತ್ತಿದೆ. ಹೀಗಾಗಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಆದರೆ ಬಸ್ಸುಗಳ ಕೊರತೆಯ ಪರಿಣಾಮ ಕೆಎಸ್ಆರ್ಟಿಸಿಗೂ ಹೆಚ್ಚಿನ ಬಸ್ಸುಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಕೊರೊನಾ ಪೂರ್ವದಲ್ಲಿ ಮಂಗಳೂರು ದಿಂದ ಧರ್ಮಸ್ಥಳಕ್ಕೆ ಹೋಗುವ ರಸ್ತೆಗಳಲ್ಲಿ ಮಧ್ಯೆ ಶಟಲ್, ನಿಗದಿತ ನಿಲುಗಡೆ ಹಾಗೂ ಎಕ್ಸ್ಪ್ರೆಸ್ ಬಸ್ಸುಗಳು ಓಡಾಡುತ್ತಿತ್ತು.ಆದರೆ ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ನಿಯಮಿತ ನಿಲ್ದಾಣ ನಿಲುಗಡೆ ಬಸ್ ಹಾಗೂ ಎಕ್ಸ್ಪ್ರೆಸ್ ಬಸ್ಸುಗಳು ಮಾತ್ರ ಸಂಚಾರಿಸುವುದರಿಂದ ಪ್ರತಿದಿನ ಕೆಲಸಕ್ಕೆ ಹೋಗಬೇಕಾದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎನ್ನಲಾಗುತ್ತಿದೆ.
ಕೆಎಸ್ಆರ್ಟಿಸಿ ಅಧಿಕಾರಿಗಳ ಮಾಹಿತಿ ಪ್ರಕಾರ ಮಂಗಳೂರು-ಧರ್ಮಸ್ಥಳ ಮಧ್ಯೆ ಮಂಗಳೂರು ವಿಭಾಗದಿಂದ ಸುಮಾರು 30 ಬಸ್ಸುಗಳು ಓಡುತ್ತಿದ್ದು, ಪ್ರತಿ 15ನಿಮಿಷಕ್ಕೊಂದು ಬಸ್ಸುಗಳು ಸಂಚರಿಸುತ್ತಿದೆ. ಜತೆಗೆ 6ಎಕ್ಸ್ಪ್ರೆಸ್ ಬಸ್ಸುಗಳು ಕೂಡ ಸಂಚಾರ ನಡೆಸುತ್ತಿವೆ. ಇನ್ನು ಮಂಗಳೂರು-ಉಜಿರೆ ಮಧ್ಯೆ ಸಂಚರಿಸುವ ಪ್ರಯಾಣಿಕರಿಗೆ ಚಿಕ್ಕಮಗಳೂರು ಕಡೆಗೆ ಸಾಗುವ ಎಕ್ಸ್ಪ್ರೆಸ್ ಬಸ್ಸುಗಳು ಕೂಡ ಇವೆ. ಆದರೂ ಪ್ರಯಾಣಿಕರ ಒತ್ತಡ ಹೆಚ್ಚಿದ್ದು, ಜತೆಗೆ ಶಕ್ತಿ ಯೋಜನೆಯ ಬಳಿಕ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳವಾಗಿದೆ ಎಂದು ಮಾಹಿತಿ ನೀಡುತ್ತಾರೆ.
ಮಂಗಳೂರು-ಧರ್ಮಸ್ಥಳ ರೂಟ್ ಬಸ್ಸಿನಲ್ಲಿ ಬಿ.ಸಿ.ರೋಡು-ಪುಂಜಾಲಕಟ್ಟೆ ಮಧ್ಯೆ ಹೆಚ್ಚಿನ ಪ್ರಯಾಣಿಕರ ಓಡಾಟವಿದ್ದು, ಹೀಗಾಗಿ ಬಿ.ಸಿ.ರೋಡು-ಪುಂಜಾಲಕಟ್ಟೆ ಮಧ್ಯೆ ಬಸ್ಸುಗಳನ್ನು ಓಡಿಸುವ ಬೇಡಿಕೆ ಕೆಎಸ್ಆರ್ಟಿಸಿಯ ಮುಂದಿದೆ. ಶಟಲ್ ಬಸ್ಸುಗಳು ಬದಲಿಗೆ, ಲಿಮಿಟೆಡ್ ಸ್ಟಾಪ್ ಬಸ್ಸುಗಳು ಮಾತ್ರ ಓಡುತ್ತಿದ್ದು, ಹೆಚ್ಚುವರಿ ನಿಲುಗಡೆಯ ಬೇಡಿಕೆ ಕೂಡ ಕೇಳಿ ಬರುತ್ತಿದೆ.
ಆದರೆ ಲಿಮಿಟೆಡ್ ಸ್ಟಾಪ್ ಬಸ್ಸುಗಳಿಗೆ ಹೆಚ್ಚಿನ ನಿಲುಗಡೆ ನೀಡಿದರೆ ಧರ್ಮಸ್ಥಳ, ಬೆಳ್ತಂಗಡಿ, ಉಜಿರೆ ಭಾಗದಿಂದ ನೇರವಾಗಿ ಮಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗುವ ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಶಟಲ್ ಬಸ್ಸುಗಳನ್ನೇ ಓಡಿಸಲು ಕೆಎಸ್ಆರ್ಟಿಸಿಯು ಚಿಂತನೆ ನಡೆಸಿದೆ.