ಬಂಟ್ವಾಳ, ಅ 01 (DaijiworldNews/HR): ಕೆ.ಎನ್.ಆರ್.ಸಿ.ಕಂಪೆನಿಗೆ ಸೇರಿದ ಘನಗಾತ್ರದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಇಂದು ಮಾಣಿಯ ಒಳರಸ್ತೆಯೊಂದರಲ್ಲಿ ನಡೆದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಇಲ್ಲದೆ ಚಾಲಕ ಪಾರಾಗಿದ್ದಾನೆ.
ಬಿಸಿರೋಡು - ಅಡ್ಡಹೊಳೆವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ.ಕಂಪೆನಿಗೆ ಸೇರಿದ ಲಾರಿ ಇದಾಗಿದೆ.
ಇತ್ತೀಚಿಗೆ ಸಂಸದರ ಜೊತೆಗೆ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಕಲ್ಲಡ್ಕದ ವರ್ತಕರು ಹಾಗೂ ಸಾರ್ವಜನಿಕರು ನಡೆಸಿದ ಸಭೆಯಲ್ಲಿ ಕೂಡ ಈ ವಿಚಾರ ಪ್ರಸ್ತಾಪವಾಗಿತ್ತು. ಕಂಪೆನಿ ವಾಹನಗಳು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡುವುದರ ಬಗ್ಗೆ ದೂರು ನೀಡಿದ ಅವರು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಅ ಬಳಿಕವೂ ಮೆಲ್ಕಾರ್ ಸಹಿತ ಅನೇಕ ಕಡೆಗಳಲ್ಲಿ ವಾಹನ ಅಪಘಾತ ಸಂಭವಿಸಿದೆ. ಹಾಗಾಗಿ ಕಂಪೆನಿಯ ಪ್ರಮುಖರು ಈ ಬಗ್ಗೆ ಹೆಚ್ಚು ಗಮನಹರಿಸುವಂತಾಗಬೇಕು ಎಂದು ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.