ವಿಟ್ಲ, ಸೆ 30 (DaijiworldNews/HR): ಬೈಕ್ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಸವಾರ 40 ಅಡಿ ಆಳದ ಹೊಳೆಗೆ ಬಿದ್ದಿದ್ದು, ಸ್ಥಳೀಯ ಮುಸ್ಲಿಂ ಯುವಕರು ರಕ್ಷಣೆ ಮಾಡಿದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿಯಲ್ಲಿ ನಡೆದಿದೆ.
ಕೊಳ್ನಾಡು ಗ್ರಾಮದ ಮಂಕುಡೆ ನಿವಾಸಿ ಪಾಕ ಪ್ರವೀಣ ಹರ್ಷವರ್ಧನ ಭಟ್(55) ಅವರು ಕಾರ್ಯನಿಮಿತ್ತ ಶನಿವಾರ ಮುಂಜಾನೆ 4ಗಂಟೆ ಸುಮಾರಿಗೆ ತನ್ನ ಬೈಕಿನಲ್ಲಿ ವಿಟ್ಲ ಕಡೆ ಹೊರಟಿದ್ದರು. ವಿಟ್ಲ-ಸಾಲೆತ್ತೂರು ರಸ್ತೆಯ ಕೊಡಂಗಾಯಿ ಸೇತುವೆಯ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು ಸವಾರ ಹರ್ಷವರ್ಧನ 40ಅಡಿ ಆಳದ ಹೊಳೆಗೆ ಬಿದ್ದಿದ್ದಾರೆ.
ಕೊಡಂಗಾಯಿ ಹೊಳೆ ಸಮೀಪ ಬೆಳಗ್ಗಿನ ಜಾವ 4ಗಂಟೆ ಸುಮಾರಿಗೆ ಈ ಬಗ್ಗೆ ಸ್ಥಳೀಯರು ನೋಡಿದ್ದಾರೆ.
ಹುಡುಕಿದಾಗ ಐವತ್ತು ಮೀಟರ್ ದೂರದಲ್ಲಿ ಹೊಳೆ ಮಧ್ಯೆ ನೀರಿನಲ್ಲಿ ಒಬ್ಬ ವ್ಯಕ್ತಿ ಬೊಬ್ಬೆ ಹೊಡೆಯುವ ಶಬ್ದ ಕೇಳಿತು. ತಕ್ಷಣವೇ ಹೊಳೆ ನೀರಿಗೆ ಹಾರಿದ ಯುವಕರು ವ್ಯಕ್ತಿಯನ್ನು ಮೇಲಕ್ಕೆತ್ತಿ ರಸ್ತೆಗೆ ತಂದು ವಿಚಾರಿಸಿದಾಗ ತಾನು ಮಂಕುಡೆಯ ಹರ್ಷವರ್ಧನ ಎಂಬ ಪರಿಚಯ ಹೇಳಿದ್ದಾರೆ. ಬಳಿಕ ಗಾಯಾಳುವನ್ನು ಉಪಚರಿಸಿದ ಯುವಕರು ಆಟೋ ಮೂಲಕ ಅವರ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದು, ಯುವಕರ ಕಾರ್ಯಕ್ಕೆ ಪಾಕಪ್ರವೀಣ ಹರ್ಷವರ್ಧನ ಮನೆಯವರು ಕೃತಜ್ಞತೆ ಸಲ್ಲಿಸಿದ್ದಾರೆ.