ಮಂಗಳೂರು, ಸೆ 29 (DaijiworldNews/HR): ಜೆಎಸ್ ಡಬ್ಲ್ಯೂ - ಮಂಗಳೂರು ಕೋಲ್ ಟರ್ಮಿನಲ್ ಕಲ್ಲಿದ್ದಲು ಸಾಗಾಟ ಹಾಗೂ ನಿರ್ವಹಣೆ, ಮಂಗಳೂರು ಬಂದರಿಗೆ ಬರುವ ಎಲ್ಲಾ ಆಮದು ಮತ್ತು ರಫ್ತು ಸರಕುಗಳನ್ನು ನಿರ್ವಹಿಸುವ, ಮಾರಾಟ ಮಾಡುವ ಕಂಪನಿಗಳು, ಎಂ.ಆರ್.ಪಿ.ಎಲ್ ಎಲ್ಲಾ ಘಟಕಗಳು, ಉಪಘಟಕಗಳು, ಅಲ್ಲದೆ ಕಾರ್ಯನಿರ್ವಹಿಸುವ ಸಿಮೆಂಟ್, ಕಬ್ಬಿಣ ಮೊದಲಾದ ಎಲ್ಲಾ ರೀತಿಯ ಉತ್ಪನ್ನಗಳ ಸಾಗಾಟ ಮಾಡುವ ಟ್ರಾನ್ಸ್ಪೋರ್ಟ್ ಕಾಂಟ್ರಾಕ್ಟರ್ಸ್, ದಕ್ಷಿಣ ಕನ್ನಡ ಲಾರಿ ಮಾಲೀಕರ ಸಂಘದವರು, ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇತರರು ಜಿಲ್ಲೆಯಲ್ಲಿ ಸರಕು ಸಾಗಾಣಿಕೆ ಮಾಡುವ 6 ರಿಂದ 16 ಚಕ್ರದ ಲಾರಿಗಳಿಗೆ ಕಿ.ಮೀ ಲೆಕ್ಕದಲ್ಲಿ ಪರಿಷ್ಕೃತ ಬಾಡಿಗೆ ದರ ನಿಗದಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸೆ.29ರ ಶುಕ್ರವಾರ ಸಭೆ ನಡೆಯಿತು.
ಮಂಗಳೂರಿನಿಂದ ಸರಕು ಹೊತ್ತು ಸಾಕಷ್ಟು ಲಾರಿಗಳು ರಾಜ್ಯಾದ್ಯಂತ ಸಾಗುತ್ತವೆ. ಅದರಲ್ಲೂ ಮುಖ್ಯವಾಗಿ ಕೊಪ್ಪಳ ಹಾಗೂ ಬಳ್ಳಾರಿಗೆ ಸಾಗುವ 6 ರಿಂದ 16 ಚಕ್ರದ ಲಾರಿಗಳ ಪ್ರತಿ ಟ್ರಿಪ್ ಗೆ 31,500 ರೂ.ಗಳು ಸಾಗಾಟ ದರವಾಗಿ ನಿಗದಿಯಾಗಿದೆ, ಈ ದರದಿಂದ ಲಾರಿ ಹಾಗೂ ಸಂಬಂಧಿತ ನಿರ್ವಹಣೆ ಇಂದಿನ ದಿನಗಳಲ್ಲಿ ಕಷ್ಟವಾಗಿದೆ, ಆದ ಕಾರಣ ಸರಕು ಸಾಗಾಣಿಕೆಗೆ ಪ್ರತಿ ಟನ್ ಗೆ 1,050 ರೂಪಾಯಿಗಳಿಂದ 1,200 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಪರಿಷ್ಕರಿಸಲು ಜಿಲ್ಲಾ ಟ್ರಕ್ ಟ್ರಾನ್ಸ್ಪೋರ್ಟ್ ಕಾಂಟ್ರಾಕ್ಟರ್ ಗಳು ಸಂಬಂಧಿಸಿದವರೊಂದಿಗೆ ಕುಲಂಕುಶವಾಗಿ ಚರ್ಚೆ ನಡೆಸಿ ಅಕ್ಟೋಬರ್ 3ರೊಳಗೆ ದರ ಪರಿಷ್ಕರಣೆ ಕುರಿತಂತೆ ಒಮ್ಮತಕ್ಕೆ ಬರುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸಲಹೆ ನೀಡಿದರು.
ಈ ಬೆಲೆ ಏರಿಕೆಗಾಗಿ ಟ್ರಕ್ ಮಾಲೀಕರು ಟ್ರಕ್ ಗಳ ಬಂದ್ ನಡೆಸಲು ಉದ್ದೇಶಿಸಿದ್ದರು, ಆದರೆ ದರ ಪರಿಷ್ಕರಣೆ ಕುರಿತಂತೆ ಜಿಲ್ಲಾಡಳಿತ ಸಂಬಂಧಿಸಿದರೊಂದಿಗೆ ಮಾತುಕತೆ ನಡೆಸಿ ಅಗತ್ಯ ಕ್ರಮ ವಹಿಸುವ ಮನವಿಗೆ ಸ್ಪಂದಿಸಿದ ಲಾರಿ ಮಾಲೀಕರ ಸಂಘದವರು ಕೂಡ ಬೆಲೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಹಮತಕ್ಕೆ ಬರುವಂತೆ ಮನವಿ ಮಾಡಿದರು.
ಬೆಲೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಕ್ಟೋಬರ್ 3ರೊಳಗೆ ಟ್ರಾನ್ಸ್ಪೋರ್ಟ್ ಕಾಂಟಾಕ್ಟ್ರುಗಳು ಹಾಗೂ ಸಂಬಂಧಿಸಿದವರು ಮಾಹಿತಿ ನೀಡಬೇಕು, ನಂತರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯoತ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್ ಪಿ., ಲಾರಿ ಮಾಲಕರ ಸಂಘದ ಅಧ್ಯಕ್ಷ ಸುಶಾಂತ್ ಶೆಟ್ಟಿ, ಗೌರವ ಅಧ್ಯಕ್ಷ ಸುಜಿತ್ ಆಳ್ವ, ಉಪಾಧ್ಯಕ್ಷ ನಿಸಾರ್, ಕಾರ್ಯದರ್ಶಿ ಸುನಿಲ್ ಡಿಸೋಜ, ಕೋಶಾಧಿಕಾರಿ ಭಾಸ್ಕರ್ ರೈ, ಮತ್ತು ಸಂಸ್ಥೆ(agency )ಸಂಘದ ಅಧ್ಯಕ್ಷ ರಾಜೇಶ್ ಹೊಸಬೆಟ್ಟು, ಸುರೇಶ್ ಶೆಟ್ಟಿ, ರತನ್ ಶೆಟ್ಟಿ, ಯೋಗೇಶ್ ಮುಂತಾದವರು ಉಪಸ್ಥಿತರಿದ್ದರು.