ಕೋಟ, ಸೆ 28 (DaijiworldNews/MS): ಕಳೆದ ಮೂರು ದಿನಗಳಿಂದ ಕೋಟ ಮೂರ್ಕೈ ಬಳಿ ಕೋಟ ವಲಯ ಲಾರಿ ಮಾಲಿಕ ಹಾಗೂ ಚಾಲಕರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲಿಸ್ ಇಲಾಖೆಯ ಆದೇಶದ ವಿರುದ್ಧ ಹೋರಾಟ ಮೂರನೇ ದಿನಕ್ಕೆ ಕಾಲಿರಿಸಿದ್ದು ಗುರುವಾರ ಕಂಬಳದ ಕೋಣ ಹಾಗೂ ಎತ್ತಿನ ಬಂಡಿ ಹಿಡಿದು ಕೋಟದಿಂದ ಸಾಲಿಗ್ರಾಮದವರೆಗೆ ಮೆರವಣಿಗೆ ಮೂಲಕ ಪ್ರತಿಭಟಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಬೈಂದೂರು ಲಾರಿ ಮಾಲಕ ಹಾಗೂ ಚಾಲಕ ಸಂಘದ ಅಧ್ಯಕ್ಷ ದಿವಾಕರ್ ಶೆಟ್ಟಿ ಮಾತನಾಡಿ ಈ ವರೆಗೆ ಇಲ್ಲದ ಕಾನೂನನ್ನು ಪ್ರಸ್ತುತ ಹೇರಿರುವ ಕ್ರಮದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಕಾನೂನು ಆದೇಶಿಸಿ ಆದರೆ ಉಡುಪಿ ಜಿಲ್ಲೆ ಇಲ್ಲಿ ತುಂಡು ಭೂಮಿಗಳನ್ನು ಹೊಂದಿದ್ದು ಇಲ್ಲಿಯ ಮಣ್ಣು ಕಲ್ಲುಗಳನ್ನು ಕಾನೂನು ಬದ್ಧಗೊಳಿಸಲು ಸಾಧ್ಯವೇ ನಿಮ್ಮ ಈ ಮಧ್ಯಂತರ ಕಾನೂನಿನಿಂದ ಅದೆಷ್ಟೊ ಕುಟುಂಬಗಳು ಬೀದಿಗೆ ಬಂದಿವೆ ಇದರ ಹೊಣೆ ನೀವೆ ಹೊರಬೇಕಾಗಿದೆ. ಕೂಲಿ ಕಾರ್ಮಿಕರು ಅತಂತ್ರರಾಗಿದ್ದಾರೆ. ಸಮಸ್ಯೆಯನ್ನು ಶೀಘ್ರ ಪರಿಹರಿಸಿ ಎಂದು ಆಗ್ರಹಿಸಿದರು.
ಇದೇ ವೇಳೆ ಕೋಟ ಮೂರ್ ಕೈ ಯಿಂದ ಹೊರಟ ಮೆರವಣಿಗೆ ಸಾಲಿಗ್ರಾಮ ಪ್ರವೇಶಿಸಿ ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಲಾಯಿತು.
ಪಂಜು ಹಿಡಿದು ಪ್ರತಿಭಟನೆ:
ಬುಧವಾರ ರಾತ್ರಿ ಪ್ರತಿಭಟನಾ ಸ್ಥಳದಲ್ಲಿ ಪಂಜು ಹಿಡಿದು ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ತಮ್ಮ ಅಕ್ರೋಶವನ್ನು ಹೊರಹಾಕಿದರು.
ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಶೀಘ್ರ ಬಗೆಹರಿಸಲು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಲಾರಿ ಮಾಲಿಕರ ಪರವಾಗಿ ಬಿಜೆಪಿ ಮುಖಂಡರಾದ ಐರೋಡಿ ವಿಠ್ಠಲ ಪೂಜಾರಿ, ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ, ಲಾರಿ ಮಾಲಿಕ ಚಾಲಕ ಸಂಘದ ಪ್ರಮುಖರಾದ ಶಿರಿಯಾರ ಗಣೇಶ್ ಪ್ರಸಾದ್ ಕಾಂಚನ್, ಗುಣಕರ ಶೆಟ್ಟಿ , ಭೋಜ ಪೂಜಾರಿ,ಮಹಾಬಲ ಪೂಜಾರಿ,ದಿನಕರ್ ಪೂಜಾರಿ,ಸುಧೀರ್ ಮಲ್ಯಾಡಿ,ಗಣೇಶ್ ಪೂಜಾರಿ, ಜನಾರ್ದನ್ ಪೂಜಾರಿ ಮತ್ತಿತರರು ಇದ್ದರು.