ಕುಂದಾಪುರ, ಸೆ 28 (DaijiworldNews/HR): ಉಡುಪಿ ಜಿಲ್ಲಾಧಿಕಾರಿಗಳ ಆದೇಶದಂತೆ ಗುರುವಾರ ಬೆಳೆ ಸಮೀಕ್ಷೆಗೆ ತೆರಳಿದ್ದ ಗ್ರಾಮಕರಣಿಕರೊಬ್ಬರಿಗೆ ಹಾಗೂ ಪಿ.ಆರ್.ಓ ಮೇಲೆ ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಜಪ್ತಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಸರ್ಕಾರೀ ನೌಕರನನ್ನು ಜಪ್ತಿ ಗ್ರಾಮದ ಗ್ರಾಮಕರಣಿಕ ನಿವೃತ್ತ ಸೇನಾಧಿಕಾರಿ ಪ್ರಕಾಶ್ ಸುವರ್ಣ ಎಂದು ತಿಳಿದು ಬಂದಿದೆ.
ಗುರುವಾರ ಬೆಳಿಗ್ಗೆ ಗ್ರಾಮ ಕರಣಿಕ ಪ್ರಕಾಶ್ ಸುವರ್ಣ ಹಾಗೂ ಪಿ.ಆರ್.ಓ. ಮಧುರಾ ಎಂಬುವರ ಜೊತೆಗೆ ಬೆಳೆ ಸಮೀಕ್ಷೆಗೆಂದು ತೆರಳಿದ್ದರು. ಈ ಸಂದರ್ಭ ಜಪ್ತಿ ಗ್ರಾಮದ ಕೈಲ್ ಕೆರೆ ಎಂಬಲ್ಲಿ ಆರೋಪಿ ಶ್ರೀನಾಥ್ ಉಡುಪ ಎಂಬುವರು ಸಂಗಡಿಗರೊಂದಿಗೆ ಸೇರಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಪ್ರಕಾಶ್ ಆರೋಪಿಸಿದ್ದಾರೆ. ಗಾಯಗೊಂಡ ಪ್ರಕಾಶ್ ಸುವರ್ಣ ಹಾಗೂ ಮಧುರ ಎಂಬುವರು ಕುಂದಾಪುರ ಸರ್ಕಾರೀ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಸರ್ಕಾರೀ ನೌಕರರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿ ಉಡುಪಿ ಜಿಲ್ಲಾ ಸರ್ಕಾರೀ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಹಾಗೂ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಆರೋಪಿಗಳನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಆಗ್ರಹಿಸಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.