ಉಡುಪಿ, ಸೆ 27 (DaijiworldNews/MS): ಕಟ್ಟಡ ಸಾಮಾಗ್ರಿ ಸಾಗಾಟ ಮಾಡುವ ಲಾರಿ – ಟೆಂಪೋ ಚಾಲಕ ಮಾಲಕರ ಸಮಸ್ಯೆಯನ್ನು ಜಿಲ್ಲಾಡಳಿತ ಮೂರು ದಿನಗಳ ಒಳಗೆ ಸರಿಪಡಿಸದೇ ಇದ್ದಲ್ಲಿ, ಎಲ್ಲಾ ಲಾರಿಗಳ ಸಹಿತವಾಗಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಉಡುಪಿ ಜಿಲ್ಲೆಯ ಐದು ಮಂದಿ ಶಾಸಕರು ಮತ್ತು ನಾನು ಧರಣಿ ಕುಳಿತುಕೊಳ್ಳುತ್ತೇವೆ” ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಫೂಜಾರಿ ಸರಕಾರವನ್ನು ಎಚ್ಚರಿಸಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು “ಇದು ಲಾರಿ ಮಾಲಕರಿಂದ ಆಗಿರುವ ಸಮಸ್ಯೆ ಅಲ್ಲ ಬದಲಾಗಿ ಸರಕಾರ ಮತ್ತು ಜಿಲ್ಲಾಡಳಿತದ ನೀತಿಗಳಿಂದಾಗಿ ಆಗಿರುವ ಸಮಸ್ಯೆ. ಜಿಲ್ಲಾಡಳಿತ ಕಾನೂನಿನ ತೊಡಕುಗಳನ್ನು ನಿವಾರಿಸಿಕೊಂಡು ಮೂರು ದಿನಗಳ ಒಳಗಾಗಿ ಈ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ಮಾತ್ರವಲ್ಲದೇ ಇದರಿಂದಾಗಿ ಸಾರ್ವಜನಿಕರ ಜನಜೀವನದ ಮೇಲೆ ಆಗುತ್ತಿರುವ ಕೆಟ್ಟ ಪರಿಣಾಮಗಳನ್ನು ತಪ್ಪಿಸಬೇಕು. ಉಡುಪಿ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಲಾರಿಗಳಲ್ಲಿ ಸುಮಾರು 35 ಸಾವಿರ ಕುಟುಂಬಗಳು ಅವಲಂಬಿತವಾಗಿವೆ. ಈ ಎಲ್ಲಾ ಕಾರ್ಮಿಕರ ಬದುಕು ಈಗ ಬೀದಿಗೆ ಬಂದಿದೆ. ಶಿರೂರು ನಿಂದ ಹೆಜಮಾಡಿಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಲಾರಿಗಳನ್ನು ನಿಲ್ಲಿಸಲಾಗಿದೆ. ಜಿಲ್ಲೆಗೆ 8 ಲಕ್ಷ ಮೆಟ್ರಿಕ್ ಟನ್ ಮರಳಿನ ಅಗತ್ಯ ಇದೆ. ಇದರಲ್ಲಿ ಸುಮಾರು 50 ಶೇಖಡಾ ಮರಳು ಸಿ ಆರ್ ಝಡ್ ನಿಂದ ಮತ್ತು ಇನ್ನುಳಿದ 4 ರಿಂದ 5 ಮೆಟ್ರಿಕ್ ಟನ್ ಮರಳು ನಾನ್ ಸಿ ಆರ್ಝಡ್ ವ್ಯಾಪ್ತಿಯಲ್ಲಿ ಲಭ್ಯ ಇದೆ. ಆದರೆ ಜಿಲ್ಲಾಡಳಿತ ಮರಳು, ಕಲ್ಲು, ಮಣ್ಣು, ಶಿಲೆ ಕಲ್ಲನ್ನು ತೆಗೆಯಲು ಅನುಮತಿಯೇ ನೀಡುತ್ತಿಲ್ಲ. ಅನುಮತಿಗಾಗಿ ಅರ್ಜಿ ಸಲ್ಲಿಸಿದರೂ ಕೂಡಾ ಅದನ್ನು ಪರಿಗಣನೆ ಮಾಡಿಲ್ಲ. ಜಿಲ್ಲೆಯ ಒಳಗೆ ಮರಳು ಸಾಗಾಟವನ್ನು ಯಾವುದೇ ಕಾರಣಕ್ಕೂ ತಡೆಯಬಾರದು ಮಾತ್ರವಲ್ಲದೇ ಮರಳು ಜಿಲ್ಲೆಯಿಂದ ಹೊರ ಹೋಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಇಂತಹ ಅಂಧಾ ಕಾನೂನು ನನ್ನು ಸಹಿಸಲು ಸಾಧ್ಯವಿಲ್ಲ. ಕಾನೂನಿನಲ್ಲಿರುವ ಗೊಂದಲ ಸರಿಪಡಿಸಿ ಮತ್ತು ಎಲ್ಲವನ್ನೂ ನಿಯಮಬದ್ದವಾಗಿ ಮಾಡಿಕೊಳ್ಳಲು 6 ತಿಂಗಳ ಕಾಲಾವಕಾಶ ನೀಡಬೇಕು. ಇದು ಇಲಾಖೆಯ ಸಮಸ್ಯೆ ಹೊರತು ಲಾರಿ ಯವರಿಂದ ಉದ್ಭವಿಸಿದ ಸಮಸ್ಯೆ ಅಲ್ಲ” ಎಂದರು.
ಪತ್ರಿಕಾಗೊಷ್ಟಿಯಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಶಾಸಕ ಕಿರನ್ ಕುಮಾರ್ ಕೊಡ್ಗಿ, ಪ್ರಮುಖರಾದ ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು.