ಮಂಗಳೂರು, ಸೆ 27 (DaijiworldNews/MS): ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಯನ್ನು ನಿರ್ವಾಹಕರು ಮತ್ತು ಕ್ಲೀನರ್ ಗಳಿಗೂ ಅನ್ವಯಿಸುವಂತೆ ಸರ್ಕಾರ ಜಾರಿಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ವಾಣಿಜ್ಯ ಸಾರಿಗೆ ವಾಹನಗಳ ನಿರ್ವಾಹಕರು, ಕ್ಲೀನರ್ಗಳು ಈ ಯೋಜನೆಯಡಿ ನೋಂದಣಿ ಮಾಡಿಸಬಹುದು.
ಯೋಜನೆಯ ಪ್ರಯೋಜನಗಳು:
ಅಪಘಾತದಿಂದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್ಗಳು ಮರಣ ಹೊಂದಿದಲ್ಲಿ ಅವರ ನಾಮನಿರ್ದೇಶಿತರಿಗೆ 5 ಲಕ್ಷ ರೂ.ಗಳ ಪರಿಹಾರ, ಶಾಶ್ವತ ದುರ್ಬಲತೆಗೆ 2 ಲಕ್ಷ ರೂ.ಗಳ ವರೆಗೆ ಪರಿಹಾರ.
ತಾತ್ಕಾಲಿಕ ದುರ್ಬಲತೆಗೆ 50,000ರೂ. ನಿಂದ, 1ಲಕ್ಷ ರೂ.ಗಳ ವರೆಗೆ ಆಸ್ಪತ್ರೆ ವೆಚ್ಚ ಮರುಪಾವತಿ.
ಶೈಕ್ಷಣಿಕ ಧನಸಹಾಯ:
ಅಪಘಾತದ ಕಾರಣ ನಿಧನರಾದ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಗಳ ಇಬ್ಬರು ಮಕ್ಕಳಿಗೆ ಪದವಿಪೂರ್ವ ವ್ಯಾಸಾಂಗದವರೆಗೆ ವಾರ್ಷಿಕ 10,000ರೂ.ಗಳ ಶೈಕ್ಷಣಿಕ ಧನಸಹಾಯ.
ಈ ಯೋಜನೆಯಡಿ ಖಾಸಗಿ ವಾಣಿಜ್ಯ ವಾಹನದ ನಿರ್ವಾಹಕರು ಮತ್ತು ಕ್ಲೀನರ್ಗಳು ನೋಂದಣಿಯಾಗಲು 20ರಿಂದ 70 ವರ್ಷದೊಳಗಿರಬೇಕು. ಸ್ಟಾಂಪ್ ಸೈಜ್ ಫೋಟೊ 1, ಪಾಸ್ ಪೋರ್ಟ್ ಸೈಜ್ 1, ಆಧಾರ್ ಕಾರ್ಡ್, ಮಾಕ್ರ್ಸ್ ಕಾರ್ಡ್(ಎಸ್.ಎಸ್.ಎಲ್.ಸಿ)/ ಡಿ.ಎಲ್/ ಪಾನ್ ಕಾರ್ಡ್, ಬ್ಯಾಂಕ್ ಖಾತೆಯ ಪ್ರತಿ, ನಿರ್ವಾಹಕರ ಊರ್ಜಿತ ಪರವಾನಿಗೆ (ಸಾರಿಗೆ ಇಲಾಖೆಯಿಂದ ಪಡೆದಿರತಕ್ಕದ್ದು) (ನಿರ್ವಾಹಕರಿಗೆ ಮಾತ್ರ), ಸಂಸ್ಥೆ/ ಮಾಲೀಕರಿಂದ ನೀಡಲಾಗಿರುವ ಗುರುತಿನ ಚೀಟಿ(ಲಭ್ಯವಿದ್ದಲ್ಲಿ) ಈ ಎಲ್ಲಾ ದಾಖಲೆಯೊಂದಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಕಾರ್ಮಿಕ ಅಧಿಕಾರಿಯವರ ಕಚೇರಿ ಹಾಗೂ ಕಾರ್ಮಿಕ ನಿರೀಕ್ಷಕರುಗಳ ಕಚೇರಿ ದೂ.ಸಂಖ್ಯೆ:0824-2435343, 0824-2433132 ಅನ್ನು ಸಂಪರ್ಕಿಸುವಂತೆ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.