ಮಂಗಳೂರು, ಸೆ 26 (DaijiworldNews/HR): ಸಾರ್ವಜನಿಕರ ಉತ್ತಮ ಜೀವನಕ್ಕಾಗಿ ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ಕೆಲಸ ಮಾಡುವ ಸ್ವಚ್ಛತಾ ಕಾರ್ಮಿಕರರ ಕೊಡುಗೆ ಅಪಾರ. ಸ್ವಚ್ಛತಾ ಕಾರ್ಮಿಕರಿಗಾಗಿ ಆಯೋಜಿಸಲಾಗುವ ಆರೋಗ್ಯ ತಪಾಸಣ ಶಿಬಿರಗಳಲ್ಲಿ ಕೆಲಸಗಾರರು ಕಡ್ಡಾಯವಾಗಿ ಭಾಗವಹಿಸಿ ಆರೋಗ್ಯವನ್ನು ತಪಾಸಣೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ. ಅವರು ಕರೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಸ್ವಚ್ಛ ಭಾರತ್ ಮಿಷನ್ (ಗ್ರಾ) ಹಾಗೂ ಮಂಗಳೂರು ತಾಲೂಕು ಪಂಚಾಯತ್ ಸಹಯೋಗದೊಂದಿಗೆ ಎ.ಜೆ ಆಸ್ಪತ್ರೆಯ ಸಹಯೋಗದೊಂದಿಗೆ ಸೆ.26ರಂದು ಸ್ವಚ್ಛತಾ ಹಿ ಸೇವಾ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸ್ವಚ್ಛತಾ ಕಾರ್ಮಿಕರು ಮತ್ತು ಅವರ ಅವಲಂಭಿತರಿಗೆ ಕಲ್ಯಾಣ ಯೋಜನೆಗಳನ್ನು ಸಮನ್ವಯ ಮಾಡಲು ಮತ್ತು ಅವರ ಯೋಗಕ್ಷೇಮ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಈ ಶಿಬಿರಗಳು ಹೊಂದಿವೆ. ಘನತ್ಯಾಜ್ಯ ನಿರ್ವಹಣೆ ಮತ್ತು ಉಪಯೋಗಿಸಿದ ನೀರು ನಿರ್ವಹಣೆಯಲ್ಲಿರುವ ಎಲ್ಲಾ ನೈರ್ಮಲ್ಯ ಕಾರ್ಮಿಕರನ್ನು ಈ ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆನ್ನುವುದು ಇದರ ಉದ್ದೇಶವಾಗಿದೆ ಎಂದರು.
ಸ್ವಚ್ಛತಾ ಕಾರ್ಮಿಕರು ದುಶ್ಚಟಗಳಿಂದ ದೂರ ಉಳಿದು ನಗರದ ಸ್ವಚ್ಛತೆ ಜತೆಗೆ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಬೇಕು. ಯಾವುದೇ ಕಾರಣಕ್ಕೂ ರಕ್ಷಣೆಯ ಪರಿಕರಣಗಳು ಇಲ್ಲದೆ ಬರಿ ಗೈನಲ್ಲಿ ತ್ಯಾಜ್ಯವನ್ನು ಮುಟ್ಟುವ ಕಾರ್ಯದಲ್ಲಿ ತೊಡಗಬಾರದು ಎಂದರು.
ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಮಹೇಶ್ ಹೊಳ್ಳ, ಸಹಾಯಕ ನಿರ್ದೇಶಕ ಮಹೇಶ್, ಎ.ಜೆ. ಆಸ್ಪತ್ರೆಯ ವೈದ್ಯ ಡಾ. ಮಿಲನ್, ಡಾ. ನಿಹಾರಿಕ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ವಚ್ಛತಾ ಕಾರ್ಮಿಕರ ಡ್ರೆಸ್ ಕೋಡ್ ವಿತರಿಸಲಾಯಿತು. ಸುಮಾರು 58 ಸ್ವಚ್ಛತಾ ಕಾರ್ಮಿಕರು ಶಿಬಿರದ ಉಪಯೋಗ ಪಡೆದುಕೊಂಡರು.