ಉಡುಪಿ, ಏ 12(MSP): ನೀತಿ ಸಂಹಿತೆ ಜಾರಿಯಲ್ಲಿರುವಾಗ ರಾಜಕೀಯ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಹಿನ್ನಲೆಯಲ್ಲಿ ಸರ್ಕಾರಿ ನೌಕರರೋರ್ವರನ್ನು ಅಮಾನತುಗೊಳಿಸಿ ಉಡುಪಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ನೀಡಿದ್ದಾರೆ.
ಅಮಾನತುಗೊಂಡವರನ್ನು ಉಡುಪಿ ತಾಲೂಕಿನ ಕೊಡವೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯರಾದ ಸುಂದರ್ ಎಂದು ಗುರುತಿಸಲಾಗಿದೆ. ಇವರು ಮೇ ತಿಂಗಳಲ್ಲಿ ನಿವೃತ್ತರಾಗಲಿದ್ದರು.
ಇವರು ಏಪ್ರಿಲ್ 7 ರಂದು ಕಾರ್ಕಳದಲ್ಲಿ ನಡೆದ ಮುಖ್ಯಮಂತ್ರಿಗಳ ಸಮಾಲೋಚನಾ ಕಾರ್ಯಕ್ರಮದಲ್ಲಿ , ಮುಖ್ಯಮಂತ್ರಿಯವರ ಜೊತೆ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮತ್ತಿತರರು ಭಾಗವಹಿಸಿದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ , ಮುಖ್ಯಮಂತ್ರಿಗೆ , "ಸರ್ವೆಯಾಗಿರುವ ಡಿಸಿ ಮನ್ನಾ ಭೂಮಿಯನ್ನು ದಲಿತರಿಗೆ ಹಂಚಿಕೆ ಮಾಡುವ ಬಗ್ಗೆ, ಗುತ್ತಿಗೆ ಆಧಾರದಲ್ಲಿ ದಲಿತರಿಗೆ ಅವಕಾಶ ಕಲ್ಪಿಸುವ ಬಗ್ಗೆ ಹಾಗೂ ಸ್ವ ಉದ್ಯೋಗಕ್ಕೆ ಅನುದಾನ ನೀಡುವ ಬಗ್ಗೆ " ಮನವಿ ಮಾಡಿದ್ದರು.
ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ರಾಜಕೀಯ ಹಿನ್ನಲೆಯಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಭಾಷಣ ಮಾಡಿ, ಪ್ರಚಾರ ಕಾರ್ಯ ಕೈಗೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದರಿಂದ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951 ರಂತೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ 2019 ರ ಮಾರ್ಚ್ 10 ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ಯಾವುದೇ ರಾಜಕೀಯ ಚುನಾವಣಾ ಪ್ರಚಾರ ಸಭೆ ಸಮಾರಂಭಗಳಲ್ಲಿ ಯಾವುದೇ ಸರ್ಕಾರಿ ನೌಕರರು ಅಧಿಕೃತವಾಗಿ ಭಾಗವಹಿಸಲು ಅವಕಾಶವಿರುವುದಿಲ್ಲ.