ಉಳ್ಳಾಲ, ಸೆ 25 (DaijiworldNews/HR): ಕಾಲೇಜು ಸುತ್ತ ನಿಷೇಧಿತ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದವನನ್ನು ಉಳ್ಳಾಲಕ್ಕೆ ಎರಡು ದಿನಗಳ ಹಿಂದೆಯಷ್ಟೇ ಆಗಮಿಸಿದ ಠಾಣಾಧಿಕಾರಿ ಹೆಚ್.ಎನ್ ಬಾಲಕೃಷ್ಣ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಗಾಂಜಾ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ದೇರಳಕಟ್ಟೆ ನಿವಾಸಿ ಶರೀಫ್ (30) ಬಂಧಿತ.
ಈತ ದೇರಳಕಟ್ಟೆಯಲ್ಲಿ ನಿಷೇಧಿತ ಮಾದಕ ವಸ್ತುವಾದ 45 ಗ್ರಾಂ ತೂಕದ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸರು ಸಹಿತ ಠಾಣಾಧಿಕಾರಿ ದಾಳಿ ನಡೆಸಿ ಬಂಧಿಸಿದ್ದಾರೆ.
ಇನ್ನು ಆರೋಪಿ ಶರೀಫ್ ವಿರುದ್ಧ ಈಗಾಗಲೇ ಉಳ್ಳಾಲ ಹಾಗೂ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸಹಿತ ಮಾದಕ ವಸ್ತುಗಳ ಮಾರಾಟ ಪ್ರಕರಣಗಳು ದಾಖಲಾಗಿವೆ. ಹಿಂದಿನ ಠಾಣಾಧಿಕಾರಿ ಸಂದೀಪ್ ಜಿ.ಎಸ್ ಅವರು ವರ್ಗಾವಣೆಗೊಂಡು ಎರಡು ದಿನಗಳ ಹಿಂದಷ್ಟೇ ನೂತನ ಠಾಣಾಧಿಕಾರಿಯಾಗಿ ಹೆಚ್.ಎನ್ ಬಾಲಕೃಷ್ಣ ಅಧಿಕಾರ ವಹಿಸಿಕೊಂಡಿದ್ದಾರೆ.
ಮುಕ್ತವಾಗಿ ದೂರು ನೀಡಿ: ನಿಷೇಧಿತ ಮಾದಕ ವಸ್ತುಗಳನ್ನು ಸಾರ್ವಜನಿಕವಾಗಿ ಮಾರಾಟ ಮಾಡುವುದು ಕಂಡುಬಂದಲ್ಲಿ ಉಳ್ಳಾಲ ಠಾಣಾಧಿಕಾರಿಗಳಿಗೆ ಮುಕ್ತವಾಗಿ ದೂರು ನೀಡಬಹುದಾಗಿದೆ. ತಕ್ಷಣ ಈ ಕುರಿತು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ಹೆಚ್.ಎನ್ ಬಾಲಕೃಷ್ಣ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಠಾಣಾ ಸಿಬ್ಬಂದಿಗಳಾದ ರಂಜಿತ್, ಮಂಜುನಾಥ್, ಅಕ್ಬರ್, ಅಶೋಕ್ ಭಾಗವಹಿಸಿದ್ದರು.