ಮಂಗಳೂರು, ಸೆ 25 (DaijiworldNews/HR): ರಾಜ್ಯದ ಇತಿಹಾಸದಲ್ಲಿಯೇ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಏಕಕಾಲಕ್ಕೆ ಎಲ್ಲಾ ಜಿಲ್ಲೆಗಳಲ್ಲೂ ಹಮ್ಮಿಕೊಳ್ಳಲಾಗಿರುವ ಮೊದಲ ಜನತಾ ದರ್ಶನ ಕಾರ್ಯಕ್ರಮದಿಂದ ಬಹುತೇಕರ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ದೊರೆಯಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸೆ.25ರ ಸೋಮವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನತಾ ದರ್ಶನ ಕಾರ್ಯಕ್ರಮ ಕಾಲಕಾಲಕ್ಕೆ ಆಯೋಜನೆಯಾಗಬೇಕು. ಹೀಗೆ ಆದಲ್ಲೀ ಜನರಿಗೆ ವಿಶ್ವಾಸ ಮೂಡಲಿದೆ, ಮುಂದಿನ ಬಾರಿ ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಜನತಾ ದರ್ಶನ ಹಮ್ಮಿಕೊಂಡು ಅಲ್ಲಿನ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸ್ಥಳದಲ್ಲಿಯೇ ಬಗೆಹರಿಸಬಹುದು. ರೊಟೇಶನ್ ಆಧಾರದಲ್ಲಿ ತಾಲೂಕುಗಳಲ್ಲಿ ಈ ಕಾರ್ಯಕ್ರಮ ಮಾಡಿದರೆ ಗ್ರಾಮೀಣ ಜನರಿಗೆ ಅನಕೂಲವಾಗಲಿದ್ದು, ಮುಂಬರುವ ದಿನಗಳಲ್ಲಿ ತಾಲೂಕು ಮಟ್ಟದ ಜನತಾ ದರ್ಶನ ಮಾಡಲಾಗುವುದು ಎಂದರು.
ಮುಖ್ಯಮಂತ್ರಿಗಳು ಜನತಾ ದರ್ಶನ ಕಾರ್ಯಕ್ರಮ ಮಾಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸೋದು ಸಾಮಾನ್ಯ. ಆದರೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಈ ಕಾರ್ಯಕ್ರಮ ಮಾಡುವ ಬಗ್ಗೆ ಈ ಕಾರ್ಯಕ್ರಮದ ಮೂಲಕ ವ್ಯವಸ್ಥಿತವಾದ ರೂಪ ನೀಡಲಾಗಿದೆ. ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಸ್ಥಳೀಯಾಡಳಿತಗಳು, ಅಧಿಕಾರಿಗಳು ಅವುಗಳಿಗೆ ಸ್ಪಂದಿಸಿದಾಗ್ಯೂ, ಕೆಲವೊಮ್ಮೆ ಸೂಕ್ತ ಪರಿಹಾರ ಸಾಧ್ಯವಾಗುವುದಿಲ್ಲ. ಅಧಿಕಾರಿವಲಯದಲ್ಲೂ ಚುರುಕಾಗಿ ಕೆಲಸ ಮಾಡಬೇಕು ಎನ್ನುವ ದೃಷ್ಟಿಯಿಂದ ಸ್ಥಳದಲ್ಲೇ ಪರಿಹಾರ ಕಲ್ಪಿಸುವಲ್ಲಿ ಇದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದಿದ್ದಾರೆ.
ಜನತಾ ದರ್ಶನದಲ್ಲಿ ಸಲ್ಲಿಕೆಯಾಗುವ ಪ್ರತಿಯೊಂದು ಅಹವಾಲಿಗೆ ಪ್ರತ್ಯೇಕವಾದ ನಂಬರ್ ನೀಡಲಾಗುವುದು. ಇಲ್ಲಿ ಸಲ್ಲಿಕೆಯಾಗುವ ಅರ್ಜಿಗಳು ಫಾಲೋಅಪ್ ಆಗಬೇಕು, ಮಾಡಲಾಗದೇ ಕಾನೂನು ತೊಡಕು ಇದ್ದರೆ ಹೇಳಬೇಕು, ಅಂದರೆ ಜನರಿಗೆ ಸ್ಪಷ್ಟವಾಗಿ ಗೊತ್ತಾಗಬೇಕು, ಯಾವ ಕಾರಣಕ್ಕೆ ಅದು ಆಗಲಿಲ್ಲವೆಂದು. ಕೆಲಸ ಆಗತ್ತೆ ಅಂದರೆ ಆಗತ್ತೆ ಎನ್ನಿ, ಆಗಲ್ಲ ಎಂದರೆ ಆಗಲ್ಲ ಎನ್ನಿ. ಅಧಿಕಾರಿಗಳಿಗೂ ಕಾನೂನು ಸ್ಪಷ್ಟತೆ ಇರಬೇಕು ಎಂದವರು ಹೇಳಿದರು.
ನಮ್ಮ ಉದ್ದೇಶ ಉತ್ತಮ ಆಡಳಿತ ನೀಡುವುದು. ಕೆಲವೊಮ್ಮೆ ಘೋಷಿಸಲಾದ ಕೆಲವು ಕಾರ್ಯಕ್ರಮ ಅನುಷ್ಠಾನವಾಗುವುದಿಲ್ಲ, ಈ ರೀತಿಯ ಕಾರ್ಯಕ್ರಮಗಳಿಂದ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಹಾಗೂ ಇದು ಒಳ್ಳೆಯ ಬೆಳವಣಿಗೆ ಕೂಡ ಎಂದು ಆಗಿದೆ ಎಂದು ಹೇಳಿದರು.
ಮುಖ್ಯವಾಗಿ ಸಾರ್ವಜನಿಕರು ಯಾವುದೇ ಕೆಲಸಕ್ಕೆ ಪರದಾಡಬಾರದು. ಯಾವುದೇ ಕೆಲಸವಾದರೂ ಸರಿ ಅದು ಆಗುತ್ತದೆ ಅಥವಾ ಆಗುವುದಿಲ್ಲವೇ ಎಂದು ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡಬೇಕು ಎಂದರು.
ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ನಗರ ಪೊಲೀಸ್ ಆಯುಕ್ತ ಅನುಪಮ್ ಅರ್ಗವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ., ಮುಖಂಡರು ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ನೂರಾರು ಸಾರ್ವಜನಿಕರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಹವಾಲುಗಳನ್ನು ಸಲ್ಲಿಸಿದರು. ಅದಕ್ಕಾಗಿ ಜಿಲ್ಲಾಡಳಿತ ಉತ್ತಮವಾದ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಮೊದಲ ಹಂತದಲ್ಲಿ ಹೆಲ್ಪ್ ಡೆಸ್ಕ್. ಎರಡನೇ ಹಂತದಲ್ಲಿ ಸಾರ್ವನಿಕರ ಅಹವಾಲುಗಳಿಗೆ ಸಂಬಧಿಸಿದ ಇಲಾಖೆಗಳ ಕೌಂಟರ್ ಗಳು. ಸುಮಾರು 60ಕ್ಕೂ ಹೆಚ್ಚು ಇಲಾಖೆಗಳಿಗಾಗಿ 14 ಕೌಂಟರ್ ಗಳನ್ನು ಸ್ಥಾಪಿಸಲಾಗಿತ್ತು. ಅಲ್ಲಿ ಅಗತ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನಿಯೋಜಿಸಿ, ಬಂದ ಸಾರ್ವಜನಿಕರಿಗೆ ಅವರ ಅಹವಾಲು ಕೇಳಿ, ಕಂಪ್ಯೂಟರ್ ನಲ್ಲಿ ದಾಖಲಿಸಿ, ಅವರ ಅರ್ಜಿಗೆ ನಂಬರ್ ನೀಡಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರ ಬಳಿಗೆ ತಮ್ಮ ಸಮಸ್ಯೆಗಳನ್ನು ತಿಳಿಸಲು ಉಸ್ತುವಾರಿ ಸಚಿವರ ಬಳಿ ಕಳುಹಿಸಲಾಯಿತು.