ಉಳ್ಳಾಲ, ಸೆ 25(DaijiworldNews/MS): ರೈಲಿನಡಿಗೆ ತಲೆಯಿಟ್ಟು ಮಂಗಳೂರು ಕೊಂಚಾಡಿ ನಿವಾಸಿ ಪ್ರಶಾಂತ್ (44) ಎಂಬವರು ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಚ್ಚಿಲ ರೈಲ್ವೇ ಗೇಟ್ ಬಳಿ ನಡೆದಿದೆ.
ಸೆ.24 ರಂದು ಸಂಜೆ ಮನೆಯಿಂದ ಹೊರಟವರು ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಆಕ್ಟಿವಾ ಸ್ಕೂಟರನ್ನು ಉಳ್ಳಾಲ ರೈಲ್ವೇ ನಿಲ್ದಾಣದಲ್ಲಿರಿಸಿ,ಉಚ್ಚಿಲ ರೈಲ್ವೇ ಗೇಟ್ ವರೆಗೆ ನಡೆದುಕೊಂಡು ತೆರಳಿ ಅಲ್ಲಿ ರೈಲ್ವೇ ಹಳಿಯಲ್ಲಿ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವಿವಾಹಿತ ರಾಗಿದ್ದ ಪ್ರಶಾಂತ್ ಅವರಿಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಕುಡಿದು ಕೃತ್ಯವನ್ನು ಎಸಗಿರುವುದಾಗಿ ವೈದ್ಯಕೀಯ ವರದಿಯಿಂದ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮಂಗಳೂರು ರೈಲ್ವೇ ಪೊಲೀಸ್ ಠಾಣೆಯ ಎಎಸ್ ಐ ಮಧುಚಂದ್ರ ನೇತೃತ್ವದಲ್ಲಿ ಪೊಲೀಸ್ ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿದೆ.
ಸ್ಟೇಷನ್ ಮಾಸ್ಟರ್ ಸೂಚನೆಯಂತೆ ನಿಂತ ರೈಲು!
ಸೆ.24 ರ ರಾತ್ರಿ 8.15 ರ ಸುಮಾರಿಗೆ ಘಟನೆ ನಡೆದಿದೆ. ಪೋರ್ ಬಂದರ್ - ಕೊಚ್ಚುವೆಲಿ ರೈಲಿನಡಿಗೆ ಬಿದ್ದು ಪ್ರಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈಲು ಉಚ್ಚಿಲಗೇಟ್ ದಾಟುತ್ತಿದ್ದಂತೆ ಎ.ಸಿ 2 ಟಯರಿನ ಬೋಗಿಯಡಿ ಶಬ್ಧ ಕೇಳಿಬಂದು, ದುರ್ವಾಸನೆ ಇರುವುದನ್ನು ಗಮನಿಸಿದ ಉಚ್ಚಿಲ ಸ್ಟೇಷನ್ ಮಾಸ್ಟರ್, ತಕ್ಷಣ ರೈಲಿನ ಲೋಕೊಪೈಲೆಟ್ ಗೆ ಮಾಹಿತಿಯನ್ನು ನೀಡಿದ್ದಾರೆ. ಅದಾಗಲೇ 2 ಕಿ.ಮೀ ದೂರ ಸಂಚರಿಸಿದ್ದ ರೈಲಿನಡಿ ಮೃತದೇಹ ಸಿಲುಕಿಕೊಂಡಿತ್ತು. ತಕ್ಷಣ ಲೋಕೊಪೈಲಟ್ ನಿಲ್ಲಿಸಿದ್ದು, ಬೋಗಿ ಕೆಳಗಡೆ ನೋಡಿದಾಗ ದೇಹ ಸಂಪೂರ್ಣವಾಗಿ ಛಿದ್ರವಾಗಿ ಟೈಯರಿನಡಿ ಸಿಲುಕಿತ್ತು. ತಕ್ಷಣ ಮಂಗಳೂರು ರೈಲ್ವೇ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದ್ದು, ರೈಲು ನಿಂತ ಘಟನೆಯಿಂದಾಗಿ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು 8.30 ಕ್ಕೆ ಘಟನಾ ಸ್ಥಳ ತಲುಪಿದ್ದಾರೆ. ನಿಮಿಷಗಳಲ್ಲಿ ರೈಲಿನಡಿ ಸಿಲುಕಿದ್ದ ದೇಹದ ಭಾಗಗಳನ್ನು ತೆಗೆದು , ರೈಲಿನಲ್ಲಿರುವ ಪ್ರಯಾಣಿಕರಿಗೆ ವಿಳಂಬವಾಗದಂತೆ ತಕ್ಷಣವೇ ರೈಲು ಸುಗಮಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ .