ಮಂಗಳೂರು, ಸೆ 25 (DaijiworldNews/MS): ಈದ್ ಮಿಲಾದ್ ದಿನ ದಕ್ಕೆಯಲ್ಲಿ ವ್ಯಾಪಾರ ನಡೆಸಿದರೆ ಬಹಿಷ್ಕಾರ ಎಂದು ಹಸಿ ಮೀನು ವ್ಯಾಪಾರಸ್ಥರ ಸಂಘದ ಹೆಸರಲ್ಲಿ ಬ್ಯಾನರ್ ಹಾಕಿರುವ ಬಗ್ಗೆ ಮಂಗಳೂರು ಧಕ್ಕೆ ಹಸಿಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘದ ಅಧ್ಯಕ್ಷರು ಹಾಗೂ ಮಾಜಿ ಮೇಯರ್ ಕೆ.ಅಶ್ರಫ್ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ಮಂಗಳೂರು ಧಕ್ಕೆಯಲ್ಲಿ ಪ್ರತೀ ವರ್ಷದ ತನ್ನ ಮತ್ತು ಇತರ ಸಂಘದ ಸಭೆಯ ನಿರ್ಣಯದಂತೆ,ಹಸಿ ಮೀನು ವ್ಯಾಪಾರಸ್ಥರ ಸಂಘ, ಸದಸ್ಯರು ಅವರರವರು ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ ಹಬ್ಬ ದಿನಗಳಲ್ಲಿ ತಮ್ಮ ವ್ಯವಹಾರಕ್ಕೆ ಕಡ್ಡಾಯ ರಜೆ ಹೊಂದುವ ಪೂರ್ವ ನಿರ್ಧರಿತ ಪದ್ಧತಿಯಂತೆ ಸೆ.28ರಂದು ಮುಸ್ಲಿಮರ ಹಬ್ಬವಾದ ಈದ್ ಮಿಲಾದ್ ಪ್ರಯುಕ್ತ ಅವರು ಮತ್ತು ಇತರ ಧರ್ಮ ಭಾಂದವರು ಕಡ್ಡಾಯ ರಜೆ ಪಾಲಿಸುವ ಬಗ್ಗೆ ವಿವಿಧ ಸಂಘಗಳಲ್ಲಿ ನಿರ್ಣಯಿಸಿದಂತೆ ಪ್ರಕಟಣೆ ಫಲಕ ಅಳವಡಿಸಲಾಗಿರುತ್ತದೆ.
ಅದೇ ರೀತಿಯಲ್ಲಿ ವರ್ಷದ ಇತರ ದಿನಗಳಲ್ಲಿ ಇತರ ಹಬ್ಬಗಳಾದ ಬಾರ್ಕೂರು ಪೂಜೆ,ಉಚ್ಚಿಲ ಪೂಜೆ, ಗಣೇಶ ಚತುರ್ಥಿ, ಈದ್ ಉಲ್ ಫಿತರ್, ಬಕ್ರೀದ್, ಈದ್ ಮಿಲಾದ್, ಗುಡ್ ಫ್ರೈಡೇ ಮತ್ತು ಕ್ರಿಸ್ಮಸ್ ಎಂಬಿತ್ಯಾದಿ ಶುಭ ದಿನಗಳಲ್ಲಿ ಕೂಡಾ ಸಂಘಗಳ ನಿರ್ಣಯದಂತೆ ಮಾರಾಟಗಾರರು ಕಡ್ಡಾಯ ರಜೆ ಪಡೆದು ಆ ದಿನದ ಮಟ್ಟಿಗೆ ಮೀನುಗಾರಿಕಾ ಮಾರಾಟ ಚಟುವಟಿಕೆ ಸ್ಥಗಿತ ಗೊಳಿಸುವುದು ಅನೇಕ ವರ್ಷಗಳಿಂದ ನಡೆದು ಕೊಂಡು ಬಂದಿರುತ್ತದೆ.
ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕಾ ಚಟುವಟಿಕೆಯಲ್ಲಿ ಹಸಿ ಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘ, ಪರ್ಶಿಯನ್ ಬೋಟ್ ಯೂನಿಯನ್, ಟ್ರಾಲ್ ಬೋಟ್ ಯೂನಿಯನ್, ಫಿಶ್ ಬಯ್ಯರ್ಸ್ ಎಸೋಸಿಯೇಶನ್ ಮತ್ತಿತರ ಸಂಘಗಳು ಸಂಯುಕ್ತವಾಗಿ ಈ ರಜೆಗಳನ್ನು ನಿರ್ಧರಿಸಲಾಗಿದೆ.
ಆದರೆ ಇತ್ತೀಚೆಗೆ ಸಾಮಾಜಿಕ ಜಾಲ ತಾಣದಲ್ಲಿ ಸಂಘದ ಮೀಲಾದ್ ರಜೆಯ ಪ್ರಕಟನಾ ಫಲಕ ( ಫ್ಲೆಕ್ಸ್ ) ದ ಬಗ್ಗೆ ಕೆಲವರು ತಪ್ಪು ಗ್ರಹಿಕೆಯ ಪ್ರಚೋದನಾತ್ಮಕ ಮಾಹಿತಿ ಹಂಚುತ್ತಿರುವುದು ಖೇದಕರ. ಇಂತಹ ತಪ್ಪು ಮಾಹಿತಿ ಗಳಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದಾಗಿ ವಿನಂತಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಬ್ಯಾನರ್ ಗೆ ವಿಶ್ವ ಹಿಂದೂ ಪರಿಷತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಆಗ್ರಹಿಸಿದೆ.