ಮಂಗಳೂರು, ಎ12(SS): ಮೈಸೂರಿನಲ್ಲಿ ಆಯೋಜಿಸಿದ್ದ ಬೃಹತ್ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಂಗಳೂರಿನ ಸುರತ್ಕಲ್ ಸಮೀಪದ ಕುತ್ತೆತ್ತೂರಿನ ಕಲಾವಿದನೊಬ್ಬ ರಚಿಸಿದ ಭಾವಚಿತ್ರವನ್ನು ನೀಡಲಾಗಿದ್ದು, ಮೋದಿಯವರು ಈ ಕಲಾಕೃತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅದ್ಭುತ ಚಿತ್ರ ಕಲಾವಿದ ಶರತ್ ಕುಲಾಲ್ ಮೋದಿಯವರ ಭಾವಚಿತ್ರವನ್ನು ಕಡಲ ನಗರಿ ಮಂಗಳೂರಿನಲ್ಲೇ ಪ್ರಧಾನಿಗೆ ನೀಡಬೇಕೆಂದುಕೊಂಡಿದ್ದರು. ಆದರೆ, ಕಾರಣಾಂತಗಳಿಂದ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ, ಮೈಸೂರಿನಲ್ಲಿ ಆಯೋಜಿಸಿದ್ದ ಬೃಹತ್ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಭಾವಚಿತ್ರ ನೀಡಲಾಗಿತ್ತು. ಈ ಭಾವಚಿತ್ರ ನೋಡಿದ ಪ್ರಧಾನಿ ಮೋದಿ ಕರಾವಳಿಯ ಕಲಾವಿದ ಶರತ್ ಕುಲಾಲ್ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
26ರ ಹರೆಯದ ಶರತ್ ಕುಲಾಲ್ ಕುಳಾಯಿ ರಾಷ್ಟ್ರಮಟ್ಟದ ಚಿತ್ರ ಕಲಾವಿದ. ವಾಟರ್ ಕಲರ್, ಆಯಿಲ್ ಕಲರ್, ಅಕ್ರಲಿಕ್, ಚಾರ್ ಕೋಲ್ ಸೇರಿದಂತೆ ಅನೇಕ ಕಲಾ ಪ್ರಕಾರಗಳನ್ನು ಕರಗತ ಮಾಡಿಕೊಂಡಿರುವ ಇವರು, ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಓಂ ಆ್ಯನಿಮೇಶನ್ ಸ್ಟೂಡಿಯೋದಲ್ಲಿ ಕಾನ್ಸೆಪ್ಟ್ ಆರ್ಟಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಉಜ್ಜೈನಿಯಲ್ಲಿ ಮಾನವ ಸಂಕೇತ ಅಕಾಡೆಮಿ ವತಿಯಿಂದ ವಿದ್ಯಾರ್ಥಿಗಳಿಗೆ ನಡೆದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಇವರು, 2009-10ರಲ್ಲಿ ಇದೇ ಸಂಸ್ಥೆಯ ವತಿಯಿಂದ ನಡೆದ ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ. 2013ರಲ್ಲಿ ದೆಹಲಿಯ ಫ್ಯೂಷನ್ ಆರ್ಟ್ ಗ್ಯಾಲರಿ ವತಿಯಿಂದ ಎಂ . ಎಫ್ ಹುಸೇನ್ ಆರ್ಟ್ ಗ್ಯಾಲರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆಯ ವೃತ್ತಿಪರ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದ ಹೆಗ್ಗಳಿಕೆ ಇವರಿಗಿದೆ. ಮಾತ್ರವಲ್ಲ, ಕರ್ನಾಟಕ ಲಲಿತಾ ಕಲಾ ಆಕಾಡೆಮಿ ವತಿಯಿಂದ ಪ್ರಶಸ್ತಿ ಗಿಟ್ಟಿಸಿಕೊಂಡ ಹಿರಿಮೆ ಇವರದು.
ಗುರುಗಳಾದ ಮನೋರಂಜನಿ ರಾವ್, ಎನ್. ಎಸ್ ಪತ್ತಾರ್, ಸಯ್ಯದ್ ಆಸೀಫ್ ಆಲಿ, ಮೋಹನ್ ಕುಮಾರ್, ನಾಗರಾಜ್ ಕೆಟಿ ಅವರ ಮಾರ್ಗದರ್ಶನದಲ್ಲಿ ಬೆಳೆದ ಇವರು ಅದ್ಭುತ ಚಿತ್ರಕಲಾವಿದರೆನಿಸಿಕಂಡಿದ್ದಾರೆ.
ಇದೀಗ ಪ್ರಧಾನಿ ನರೇಂದ್ರ ಮೋದಿಯಿಂದ ಪ್ರಶಂಸೆ ಪಡೆದುಕೊಂಡಿರುವ ಶರತ್ ಕುಲಾಲ್ ತಮ್ಮ ಪ್ರತಿಭೆಯಿಂದ ಸದ್ದಿಲ್ಲದೇ ಕರಾವಳಿಯಲ್ಲಿ ಸುದ್ದಿ ಮಾಡುತ್ತಿದ್ದಾರೆ.