ಬಂಟ್ವಾಳ, ಸೆ 23 (DaijiworldNews/HR): ಓವರ್ ಟೇಕ್ ಮಾಡಲು ಹೋದ ಟೆಂಪೋ ರಿಕ್ಷಾವನ್ನು ಬಚಾವ್ ಮಾಡಲು ಹೋಗಿ ಕರೆಂಟ್ ಕಂಬಕ್ಕೆ ಸರಕಾರಿ ಬಸ್ ಗುದ್ದಿದ ಘಟನೆ ಸಜಿಪಮೂಡ ಗ್ರಾಮದ ಕಂದೂರು ಎಂಬಲ್ಲಿ ನಡೆದಿದೆ.
ಟೆಂಪೋ ರಿಕ್ಷಾ ಚಾಲಕನೋರ್ವ ಆಕ್ಟಿವಾವನ್ನು ಓವರ್ ಟೇಕ್ ಮಾಡಲು ಹೋಗಿದ್ದು ಈ ಸಂದರ್ಭ ಮುಡಿಪು ಮಾರ್ಗವಾಗಿ ಬರುತ್ತಿದ್ದ ಕಾಸರಗೋಡು ಬಿ.ಸಿ.ರೋಡ್ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ತಿರುಗಿದ್ದು, ಈ ಸಂದರ್ಭ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಟೆಂಪೋ ರಿಕ್ಷಾ ಚಾಲಕ ಇಲ್ಯಾಸ್ ಮೆಲ್ಕಾರಿನಿಂದ ಬರುತ್ತಿದ್ದು ಈ ವೇಳೆ ಕಂದೂರಿನ ಬಜಾರ್ ಅಡಿಟೋರಿಯಮ್ ಬಳಿ ಆಕ್ಟೀವಾ ಒಂದನ್ನು ಓವರ್ ಟೇಕ್ ಮಾಡಲು ಹೋದ ಸಂದರ್ಭ ಘಟನೆ ನಡೆದಿದೆ. ಬಸ್ ಗುದ್ದಿದ್ದ ರಭಸಕ್ಕೆ ಕರೆಂಟ್ ಕಂಬ ತುಂಡಾಗಿದ್ದು, ಬಸ್ಸಿನಲ್ಲಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೋಲಿಸರು ಆಗಮಿಸಿ, ಪರಿಶೀಲನೆ ನಡೆಸಿದರು.