ಕಾರ್ಕಳ, ಸೆ 23 (DaijiworldNews/HR): ಮಹಿಳೆಯರಿಗೆ ಮೀಸಲಾತಿ ನೀಡುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು ಅದು ಕಾಂಗ್ರೆಸ್ ಸರಕಾರದ ಕೊಡುಗೆಯಾಗಿತ್ತೆಂದು ಮಾಜಿ ಮುಖ್ಯ ಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ ಹೇಳಿದರು.
ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 1993ರಲ್ಲಿಯೇ ಮಹಿಳೆಯರಿಗೆ ಮೀಸಲಾತಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ನಲ್ಲಿ ಶೇ. 50 ಮೀಸಲಾತಿಯನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತಂದಿತ್ತು. ಅಂದಿನ ಪಂಚಾಯತ್ ಚುನಾವಣೆಯಲ್ಲಿ ಶೇ. 52ದಷ್ಟು ಮಹಿಳೆಯರು ಚುನಾವಣೆಯಲ್ಲಿ ಆಯ್ಕೆಯಾಗಿದ್ದರು ಎಂದರು.
ಬಿಜೆಪಿ ಪಕ್ಷವು ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುತ್ತಿದೆ. 2024ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜಾತಿಗಳ ನಡುವೆ ಸಂಘರ್ಷಕ್ಕೆ ಒತ್ತುನೀಡುತ್ತದೆ ಎಂದು ಹೇಳಿದ ಮಾಜಿಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತುಮುಂದುವರಿಸಿ, ರಾಷ್ಟ್ರಮಟ್ಟದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ವಿಜಯೋತ್ಸವದ ಹಾದಿಯ ಮುನ್ನೆಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಎಲ್ಲಾ ಬೆಳವಣಿಗೆಯ ಕಂಡು ಬಿಜೆಪಿಯೂ ಜೆಡಿಎಸ್ ನೊಂದಿಗೆ ಮೈತ್ರಿಕೂಟಕ್ಕೆ ಮುಂದಾಗಿದೆ. ಬಿಜೆಪಿ ಉಡಕ್ಕೆ ಸರಿಸಮಾನವಾಗಿದ್ದು, ಆ ಪಕ್ಷದೊಂದಿಗೆ ಯಾವೆಲ್ಲ ಪಕ್ಷಗಳು ಮೈತ್ರಿ ಮಾಡಿಕೊಂಡಿದವೋ ಅವೆಲ್ಲವೂ ಸರ್ವನಾಶವಾಗಿರುವುದು ರಾಜಕೀಯ ಬೆಳವಣಿಗೆಯಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರು, ದಲಿತರು ಶೋಷಿತ ವರ್ಗಗಳು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಹೃದಯವಂತಿಕೆ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರವಿದೆ. ಪ್ರತಿಕಾರ ರಾಜಕೀಯ ಕಾಂಗ್ರೆಸ್ ಎಂದಿಗೂ ಮಾಡಿಲ್ಲ. ಈ ನಿಟ್ಟಿನಲ್ಲಿ ಸೋಲಿಸಿದವರ ಮನಪರಿವರ್ತಿಸಿ ಅವರಿಂದಲೇ ಪಕ್ಷ ಸಂಘಟಿಸುವ ಸತ್ಕಾರ್ಯ ನಡೆಸಬೇಕು. ಅಧಿಕಾರ ಎಂಬುವುದು ಶಾಶ್ವತವಲ್ಲ. ಆದರೂ ಪಕ್ಷ ಹಾಗೂ ಸಂಘಟನೆ ನೀಡಿದ ಜವಾಬ್ದಾರಿ ಸತ್ಕಾರ್ಯಗಳನ್ನು ಚಾಚುತಪ್ಪದೇ ಶೃದ್ಧೆ, ಭಕ್ತಿಯಿಂದ ಮಾಡಿಕೊಂಡು ಬಂದಾಗ ಯಶಸ್ಸು ನಮ್ಮದಾಗುತ್ತದೆ ಎಂದರು.
ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತ ಪರ ಧೋರಣೆಯಿಂದ ಎಂದಿಗೂ ಹಿಂದೆ ಸರಿಯಲೇ ಬಾರದೆಂಬ ದೃಢ ನಿರ್ಧಾರ ನಾಯಕರದಾಗಲಿ ಎಂದರು.
ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸಲು ಮೂರು ವರ್ಷ ತಗುಲಿತು. ಅದರೆ ಕಾರ್ಕಳ ತಾಲೂಕಿನಲ್ಲಿ ಮಾತ್ರ ಅರು ತಿಂಗಳಲ್ಲಿ ಪರಶುರಾಮ ಮೂರ್ತಿ ನಿರ್ಮಾಣಗೊಂಡಿದೆ. ಪರಶುರಾಮನ ಪ್ರತಿಮೆ ನಿರ್ಮಾಣದಲ್ಲಿ ಜನರ ದಿಕ್ಕು ತಪ್ಪಿಸಿದ್ದಾರೆ . ಸತ್ಯಾಸತ್ಯತೆ ತಿಳಿದಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಹಿರಂಗವಾಗಿ ಮಾಹಿತಿ ನೀಡಿದರು.
ಒಂದು ಕೋಟಿ ಎಂಟು ಲಕ್ಷ ಗೃಹ ಲಕ್ಷ್ಮಿ ಯೊಜನೆಯು ಫಲಾನುಭವಿಗಳಿಗೆ ತಲುಪಿದೆ. ಅಧಾರ್ ಸೀಡಿಂಗ್ ಹಾಗೂ ಮಹಿಳೆಯರ ಖಾತೆಗಳು ಸ್ಥಗಿತಹೊಂಡ ಕಾರಣದಿಂದಾಗಿ ಆ ಯೋಜನೆಯೂ ಎಂಟು ಲಕ್ಷ ಖಾತೆಗಳಿಗೆ ತಲುಪಲು ಅಸಾಧ್ಯವಾಯಿತ್ತೆಂದರು. ಸರಕಾರವು ರೂ. 34,000 ಕೋಟಿ ಹಣವನ್ನು ನೇರವಾಗಿ ಮಹಿಳೆಯರಿಗೆ ಖಾತೆಗಳಿಗೆ ವರ್ಗಾವಣೆ ಮಾಡಿದ ಕೀರ್ತಿ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ ಎಂದರು.
ನ್ಯಾಯವಾದಿ ಸುಧೀರ್ ಮರೋಳಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ ಇವರು ಸಂದಭೋಚಿತವಾಗಿ ಮಾತನಾಡಿದರು.
ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಮಾತನಾಡಿ ಕಾಂಗ್ರೆಸ್ ಪಕ್ಷದ ದುರಾಡಳಿತವನ್ನು ಕಡೆಗಣಿಸಿ ಜಿ.ಪಂ ಹಾಗೂ ತಾ.ಪಂ ಚುನಾವಣೆಗಳನ್ನು ಎದುರಿಸಲು ಸಿದ್ದರಾಗಬೇಕು ಎಂದು ಕಾರ್ಯಕರ್ತರಿಗೆ ಕರೆನೀಡಿದರು.
ಉಡುಪಿ ಜಿಲ್ಲಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡ ಅಶೋಕ್ ಕುಮಾರ್ ಅಧ್ಯಕ್ಷತೆವಹಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾಗಟ್ಟಿ ಮಾತನಾಡಿ ಪಕ್ಷದ ಕಾರ್ಯಕರ್ತರು ನಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ. ಬಿಜೆಪಿ ಧರ್ಮವನ್ನಿಟ್ಟುಕೊಂಡು ರಾಜಕಾರಣ ಮಾಡುತ್ತಿದೆ ಎಂದರು.
ಕಾಂಗ್ರೇಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಸುಧೀರ್ ಮರೋಳಿ ಮಾತನಾಡಿದರು.ರಾಜ್ಯ ಕೃಷಿ ಘಟಕ ಕಾರ್ಯದರ್ಶಿ ಉದಯ ವಿ. ಶೆಟ್ಟಿ ಕಾರ್ಯದರ್ಶಿ, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ಹೆಬ್ರಿ ಬ್ಲಾಕ್ ಮಾಜಿ ಅಧ್ಯಕ್ಷ ಮಂಜುನಾಥ ಪೂಜಾರಿ, ಜಿಲ್ಲಾ ವಕ್ತಾರರ ಬಿಪಿನಚಂದ್ರ ಪಾಲ್, ಜಿಲ್ಲಾ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ರಾಘವ ದೇವಾಡಿಗ, ಜಿಲ್ಲಾ ಕಾಂಗ್ರೆಸ್ ಸದಸ್ಯ ಶಿರಿಯಣ್ಣ ಶೆಟ್ಟಿ, ಸುಭೋದ್ ಶೆಟ್ಟಿ,ಇಂಟಕ್ ಅದ್ಯಕ್ಷ ಕಿರಣ್ ಹೆಗ್ಡೆ, ಡಾ.ಪ್ರೇಮ್ ದಾಸ್, ಜಿಲ್ಲಾ ಅಲ್ಪಸಂಖ್ಯಾತ ಸಮಿತಿ ಸದಸ್ಯ ಮೊಯಿದ್ದಿನಬ್ಬ ಇನ್ನಾ, ಆರೀಫ್ ಕಲ್ಲೊಟ್ಟೆ, ಮಹಮ್ಮದ್ ಅಸ್ಲಾಂ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಗೀತಾ ವಾಗ್ಲೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಮಾಲಿನಿ ಎನ್. ರೈ, ಜಿಲ್ಲಾ ಯುವ ಕಾಂಗ್ರೆಸ್ ದೀಪಕ್ ಕೋಟ್ಯಾನ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕಾರ್ಕಳ ಕೆ. ಸದಾಶಿವ ದೇವಾಡಿಗ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರಶೇಖರ ಬಾಯರಿ ಮೊದಲಾದವರು ಉಪಸ್ಥಿತರಿದ್ದರು.