ಕಾರ್ಕಳ, ಸೆ 23 (DaijiworldNews/HR): ಕಾರ್ಕಳದ ಥೀಂ ಪಾರ್ಕ್ ಇತ್ತೀಚೆಗೆ ವಿವಾದಕ್ಕೆ ಕಾರಣವಾಗುತ್ತಿರುವ ಹಿನ್ನಲೆಯಲ್ಲಿ ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಅಧಿಕಾರಿಗಳಿಂದ ಕಾಮಗಾರಿಯ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು. ಸಚಿವೆ ಭೇಟಿ ಸಂದರ್ಭದಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿ ನಿರ್ವಹಿಸಿದ್ದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗೈರಾಗಿದ್ದದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಿದ ಸಚಿವೆ ನಿರ್ಮಿತಿ ಕೇಂದ್ರದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ. ಆ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಬಹಳಷ್ಟು ಜನರ ಒತ್ತಾಯ ಇತ್ತು, ಇದರಿಂದಾಗಿ ಇಂದು ಇಲ್ಲಿಗೆ ಬಂದಿದ್ದೇನೆ. ನಾನು ಇಲ್ಲಿ ಯಾರ ಮೇಲೂ ಆರೊಪ ಮಾಡಲು ಬಂದಿಲ್ಲ. ಆದರೆ, ಚುನಾವಣೆ ಹತ್ತಿರವಿದ್ದಾಗ ವೇಗವಾಗಿ ಕೆಲಸ ಮಾಡಿ ಜನರ ದಿಕ್ಕು ತಪ್ಪಿಸು ಕೆಲಸವಾಗಿದೆ. ಅಧಿಕಾರಿಗಳು ಒತ್ತಡದಿಂದ ಇದನ್ನು ಮಾಡಿದ್ದಾರೆ ಎಂದಿದ್ದಾರೆ.
ರಾಜಕೀಯ ಮಾಡುವುದಕ್ಕಿಂತ, ಪ್ರವಾಸಿಗರ ಸುರಕ್ಷತೆಗೆ ಗಮನ ನೀಡುತ್ತೇನೆ. ಏನಾದರೂ ಅವಘಡ ನಡೆದರೆ ಯಾವ ವಿಭಾಗ ಹೊಣೆ ಹೊರಲಿದೆ ? ನನಗೆ ಕೆಲಸ ಮಾಡಲು ಅವಕಾಶ ಕೊಡಿ ಖಂಡಿತವಾಗಿ ರಿಸಲ್ಟ್ ನೀಡುತ್ತೇನೆ ಎಂದರು.
ಒಂದೂವರೆ ಟನ್ ಭಾರದ 33 ಅಡಿ ಎತ್ತರದ ಪರಶುರಾಮ ಮೂರ್ತಿ ಸ್ಥಾಪಿಸಿದ್ದು, ಮೂರ್ತಿ ಗುಣಮಟ್ಟದ ಬಗ್ಗೆ ಆಕ್ಷೇಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಚಿವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಪ್ರವಾಸೋದ್ಯಮ ಕ್ಷೇತ್ರವಾಗಿಸುವ ದೃಷ್ಟಿಯಿಂದ ಪಾರ್ಕ್ ಅಭಿವೃದ್ಧಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.