ಮಂಗಳೂರು, ಸೆ 23 (DaijiworldNews/MS): ಯುನಿಸೆಕ್ಸ್ ಸೆಲೂನ್ಗಳನ್ನು ನಡೆಸುವ ನೆಪದಲ್ಲಿ , ಕಾನೂನುಬಾಹಿರ ಚಟುವಟಿಕೆಗಳು ನಡೆದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಎಚ್ಚರಿಕೆ ನೀಡಿದ್ದಾರೆ.
ಯುನಿಸೆಕ್ಸ್ ಸೆಲೂನ್ ಗಳ ಹೆಸರಿನಲ್ಲಿ ಕೆಲವೆಡೆ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಇಲಾಖೆಗೆ ದೂರುಗಳು ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ನಗರದ 14 ಸೆಲೂನ್ಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದೆ.
ಸೆಲೂನ್ ಮಾಲೀಕರು ತಮ್ಮಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಬಗ್ಗೆ ಪೊಲೀಸ್ ದೃಢೀಕರಣ ಪಡೆಯಬೇಕು. ಇದು ಪೊಲೀಸ್ ಇಲಾಖೆಯ ಉಚಿತ ಸೇವೆಯಾಗಿರುತ್ತದೆ. ಅಲ್ಲದೆ ರಿಸೆಪ್ಷನ್, ಪ್ರವೇಶ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಬೇಕು. ಎಲ್ಲ ಗ್ರಾಹಕರ ಮಾಹಿತಿ ದಾಖಲಿಸಿಕೊಳ್ಳಬೇಕು. ಸಂಬಂಧಿಸಿದ ಇತರ ಇಲಾಖೆಗಳ ಮಾರ್ಗಸೂಚಿಗಳನ್ನು ಪಾಲಿಸಬೇಕು. ಇಲ್ಲವಾದರಲ್ಲಿ ಕಾನೂನು ಪ್ರಕಾರ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.