ಮಂಗಳೂರು, ಸೆ 22 (DaijiworldNews/MS): ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಲಿ.ಗೆ ವಂಚಿಸಿದ ಆರೋಪಿ ಮಂಜುನಾಥ್ ಖಾರ್ವಿಯನ್ನು ಬಂಧಿಸಲಾಗಿದ್ದು, ಜೈಲು ಶಿಕ್ಷೆ ವಿಧಿಸಲಾಗಿದೆ.
ಮಂಜುನಾಥ ಖಾರ್ವಿ ಶಿಕ್ಷೆಗೊಳಗಾದಾತ. ಈತ ಸಹಕಾರಿ ಮೀನು ಮಾರಾಟ ಫೆಡರೇಷನ್ ಲಿ. ಸಂಸ್ಥೆಯಿಂದ ಮೀನು ಖರೀದಿ ಮಾಡಿದ್ದ. ಮಾತ್ರವಲ್ಲದೇ ಫೆಡರೇಷನ್ಗೆ ಮೀನು ಮಾರಾಟವಾದ ಕಮಿಷನ್ ಕೂಡ ಬಾಕಿ ಇರಿಸಿದ್ದ. ಈ ಮೊತ್ತವನ್ನು ಪಾವತಿಸಲು ನೀಡಿದ್ದ ಮೂರು ಚೆಕ್ ಗಳು ಬೌನ್ಸ್ ಆಗಿದ್ದವು. ಈ ಹಿನ್ನಲೆಯಲ್ಲಿ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಲಾಗಿತ್ತು.
ನ್ಯಾಯಾಲಯ ಮೂರು ಪ್ರಕರಣಗಳಲ್ಲಿ ಆರೋಪಿ 5 ಲ.ರೂ., 53 ಲ.ರೂ. ಮತ್ತು 30 ಲ.ರೂ. ಸೇರಿದಂತೆ ಒಟ್ಟು 88 ಲ.ರೂ ಪಾವತಿಸಬೇಕು ಎಂದು ಈ ಹಿಂದೆ ತೀರ್ಪು ನೀಡಿತ್ತು.
ತೀರ್ಪಿನಂತೆ ಹಣ ಮರುಪಾವತಿ ಮಾಡಲು ವಿಫಲನಾದ ಮಂಜುನಾಥ್ ಖಾರ್ವಿ ವಿರುದ್ಧ ವಾರಂಟ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸರು ಉಪ್ಪುಂದದ ಮನೆಯಲ್ಲಿ ಬಂಧಿಸಿ 5ನೇ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಸೆಪ್ಟೆಂಬರ್ 20 ರಂದು ಹಾಜರು ಪಡಿಸಿದ ಸಂದರ್ಭದಲ್ಲಿ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದೂರುದಾರರ ಪರ ವೆರಿಟಾಸ್ ಲೆಗೀಸ್ ಅಸೋಸಿಯೇಷನ್ ಮಂಗಳೂರಿನ ವಕೀಲರಾದ ರಾಘವೇಂದ್ರ ರಾವ್, ಗೌರಿ ಶೆಣೈ ವಾದಿಸಿದ್ದರು.