ಕಾಸರಗೋಡು, ಸೆ 21 (DaijiworldNews/MS): ಅಭ್ಯರ್ಥಿ ಯಿಂದ ನಾಮಪತ್ರ ಹಿಂಪಡೆಯಲು ಲಂಚ ನೀಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಸೇರಿದಂತೆ ಆರು ಮಂದಿ ಆರೋಪಿಗಳು ಮೂರನೇ ಬಾರಿಗೆ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಗುರುವಾರ ಬೆಳಿಗ್ಗೆ ಪ್ರಕರಣವನ್ನು ಕೈಗೆತ್ತಿಕೊಂಡಾಗ ಆರೋಪಿಗಳು ಹಾಜರಾಗಿಲ್ಲ ಎಂದು ಆರೋಪಿಗಳ ಪರ ವಕೀಲರು ತಿಳಿಸಿದರು.
ಪ್ರಕರಣ ವನ್ನು ರದ್ದುಗೊಳಿಸುವಂತೆ ಆರೋಪಿಗಳ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಕಾನೂನಾತ್ಮಕವಾಗಿ ಪ್ರಕರಣ ನೆಲೆ ನಿಲ್ಲದು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ವಿಚಾರಣೆ ಯನ್ನು ಅಕ್ಟೋಬರ್ 4ಕ್ಕೆ ಮುಂದೂಡಲಾಗಿದೆ.
ಕಳೆದ ಎರಡು ಸಲ ಹಾಜರಾಗಲು ನೋಟಿಸ್ ನೀಡಿದ್ದರೂ ಆರೋಪಿಗಳು ಗೈರಾಗಿದ್ದು, ಮೂರನೇ ಬಾರಿಯೂ ಹಾಜರಾಗಿಲ್ಲ. ಮುಂದಿನ ವಿಚಾರಣೆ ವೇಳೆ ಆರೋಪಿ ಗಳ ಪರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದೆ. 2021 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಬಿ ಜೆಪಿ ಅಭ್ಯರ್ಥಿಯಾಗಿದ್ದ ಕೆ. ಸುರೇಂದ್ರನ್ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರರಿಂದ ನಾಮಪತ್ರ ಹಿಂಪಡೆಯುವಂತೆ ಬೆದರಿಕೆ ಹಾಕಿದ್ದು, ನಾಮಪತ್ರ ಹಿಂದಕ್ಕೆ ಪಡೆಯಲು ಎರಡೂವರೆ ಲಕ್ಷ ರೂ. ನಗದು ಹಾಗೂ ಸ್ಮಾರ್ಟ್ ಫೋನ್ ನೀಡಿದ್ದಾಗಿ ಚುನಾವಣೆ ಬಳಿಕ ಬೆಳಕಿಗೆ ಬಂದಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ದ್ದರು. ಸುರೇಂದ್ರನ್ ಅಲ್ಲದೆ ಯುವ ಮೋರ್ಚಾ ರಾಜ್ಯ ಕೋಶಾಧಿಕಾರಿ ಸುನಿಲ್ ನಾಯ್ಕ್, ಬಿ ಜೆ ಪಿ ಮಾಜಿ ಜಿಲ್ಲಾಧ್ಯಕ್ಷ ಕೆ. ಬಾಲಕೃಷ್ಣ ಶೆಟ್ಟಿ, ಮುಖಂಡರಾದ ಕೆ. ಸುರೇಶ್ ನಾಯ್ಕ್ , ಮಣಿ ಕಂಠ ರೈ, ಲೋಕೇಶ್ ನೋಂಡ ಉಳಿದ ಆರೋಪಿಗಳಾಗಿದ್ದಾರೆ.