ಉಡುಪಿ, ಸೆ 21 (DaijiworldNews/MS): "ಸರಕಾರದ ನಿರ್ಲ್ಯಕ್ಷದಿಂದ ಸಂಕಷ್ಟಕ್ಕೆ ಒಳಗಾಗಿರುವ ಉಡುಪಿಯ ಬಡ ಡಯಾಲಿಸಿಸ್ ರೋಗಿಗಳಿಗೆ ನಾಳೆಯಿಂದ ಉಡುಪಿಯ ಆದರ್ಶ ಆಸ್ಪತ್ರೆ ಮತ್ತು ಡಾಕ್ಟರ್ ಟಿಎಂಎ ಪೈ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ" ಎಂದು ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಹೇಳಿದರು.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಿ ಸಿಬ್ಬಂದಿಗಳು ಮತ್ತು ಜಿಲಾಸ್ಪತ್ರೆಯ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು "ಈ ಹಿಂದೆ ಉಡುಪಿಯಲ್ಲಿ 10 ಯಂತ್ರಗಳ ಮೂಲಕ ಡಯಾಲಿಸಿಸ್ ಗೆ ಅವಕಾಶ ಕಲ್ಪಿಸಲಾಗಿತ್ತು, ಆದರೆ ಇವತ್ತು ಸರಕಾರದ ನಿರ್ಲ್ಯಕ್ಷದಿಂದ ಕೇವಲ ಒಂದು ಡಯಾಲಿಸಿಸ್ ಯಂತ್ರ ಕಾರ್ಯನಿರ್ವಹಿಸುತ್ತಿದೆ. ಸಿಬ್ಬಂದಿಗಳು ಕೂಡಾ ಸರಿಯಾದ ವೇತನ ಸಿಗದೇ ಕೆಲಸ ಬಿಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಸಂಭಂಧಪಟ್ಟ ಅಧಿಕಾರಿಗಳು, ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ಕೂಡಾ ತರಲಾಗಿದೆ. ಸರಕಾರ ಬಡ ರೊಗಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ. ಸುಮಾರು 43 ಜನ ರೋಗಿಗಳು ವಾರದಲ್ಲಿ ಇಲ್ಲಿ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಇದು ಉಚಿತ ಸೇವೆ ಆದುದರಿಂದ ಇದನ್ನು ಕನಿಷ್ಟ ಮೊತ್ತದಲ್ಲಿ ನೀಡಲು ನಾವು ಆಸ್ಪತ್ರೆಗಳಿಗೆ ಮನವಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇತರ ಆಸ್ಪತ್ರೆಗಳಲ್ಲಿ ಕೂಡಾ ಇದರ ಪ್ರಯೋಜನ ಸಿಗುವಂತೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಬಹಳಷ್ಟು ಭಾಗ್ಯಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿರುವ ಸರಕಾರ ಇಂದು ಜನರ ಜೀವನದೊಂದಿದೆ ಚೆಲ್ಲಾಟವಾಡುತ್ತಿದೆ. ನಾನು ಸರಕಾರಕ್ಕೆ 15 ದಿನದ ಗಡುವನ್ನು ನೀಡುತ್ತಿದ್ದೇನೆ, ಅಷ್ಟರ ಒಳಗೆ ಸರಕಾರ ಡಯಾಲಿಸಿಸ್ ಘಟಕ ಮತ್ತು ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸಮಸ್ಯೆಯನ್ನು ಬಗೆ ಹರಿಸಬೇಕು. ಇಲ್ಲವಾದಲ್ಲಿ ಬಡ ಜನರಿಗೆ ನ್ಯಾಯ ಒದಗಿಸುವ ಸಲುವಾಗಿ ಬೃಹತ್ ಮಟ್ಟದ ಪ್ರತಿಭಟನೆ ಗಳನ್ನು ನಡೆಸಲಾಗುವುದು" ಎಂದರು.
"ಉಡುಪಿಯ ಬಡ ಜನರ ಸಮಸ್ಯೆಗಳನ್ನು ನೋಡುವಾಗ ಬಹಳ ಬೇಜಾರಾಗುತ್ತದೆ. ಕೆಲವೊಂದು ರೋಗಿಗಳಿಗೆ ವಾರದಲ್ಲಿ ಮೂರು ದಿನ ಡಯಾಲಿಸಿಸ್ ಮಾಡಲೇ ಬೇಕಾದ ಅನಿವಾರ್ಯತೆ ಕೂಡಾ ಇದೆ, ಇಲ್ಲದಿದ್ದಲ್ಲಿ ಅವರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಕೂಡಾ ಇದೆ" ಎಂದು ಯಶ್ಪಾಲ್ ಸುವರ್ಣ ಹೇಳಿದರು.
ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ 10 ಯಂತ್ರಗಳು ಇದ್ದು, ಇದರಲ್ಲಿ ಕೇವಲ ಒಂದು ಯಂತ್ರ ಮಾತ್ರ ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. ಮಾತ್ರವಲ್ಲದೇ ಇಲ್ಲಿ ಸಿಬ್ಬಂದಿ ಕೊರತೆ ಕೂಡಾ ತೀವ್ರತರವಾಗಿ ಎದುರಾಗಿದ್ದು ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿಗಳು ಉಡುಪಿ ಡಯಾಲಿಸಿಸ್ ಕೇಂದ್ರದಲ್ಲಿ ಲಭ್ಯರಿಲ್ಲ. ಪ್ರಸ್ತುತ ಕೇವಲ ತಾಂತ್ರಿಕ ಸಿಬ್ಬಂದಿ ಮಾತ್ರ ಇದ್ದು ಅವರೇ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ತಾಂತ್ರಿಕ ಸಿಬ್ಬಂದಿಗೆ ಕೂಡಾ ಕಳೆದ 2 ತಿಂಗಳಿನಿಂದ ಸಂಬಳ ವನ್ನು ಕೂಡಾ ನೀಡಿಲ್ಲ.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ವೀಣಾ, ಜಿಲ್ಲಾ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.