ಉಡುಪಿ, ಸೆ 21 (DaijiworldNews/HR): ಮಂಗಳೂರು ನೇವಲ್ ಎನ್ಸಿಸಿ ಯುನಿಟ್ ಆಶ್ರಯದಲ್ಲಿ ಉದ್ಯಾವರದಲ್ಲಿ ನಡೆಯುತ್ತಿರುವ ಓಶಿಯನ್ ಸೈಲಿಂಗ್ ಎಕ್ಸ್ಪೆಡಿಶನ್ ಶಿಬಿರದಲ್ಲಿ ಪಾಲ್ಗೊಂಡಿರುವ ಎನ್ಸಿಸಿ ನೇವಲ್ ಕೆಡೆಟ್ಗಳಿಂದ ಮಂಗಳವಾರ ಮಲ್ಪೆ ಬೀಚ್ ಬಳಿಯ ಆಳ ಸಮುದ್ರದಲ್ಲಿ ಓಪನ್ ಸಿ ಸೈಲಿಂಗ್ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಅವರು ಚಾಲನೆ ನೀಡಿ, ಸಂದೇಶ ನೀಡಿದರು. ಯಾಂತ್ರಿಕ ರಕ್ಷಣಾ ಬೋಟ್ಗಳ ಬೆಂಗಾವಲಿನಲ್ಲಿ ಶಿಬಿರದ 72 ಮಂದಿ ಕೆಡೆಟ್ಗಳು ಕ್ಯಾಂಪ್ ಕಮಾಂಡೆಂಟ್ ಕಮಾಂಡರ್ ಕ್ಲೋಡಿ ಲೋಬೊ ಅವರ ಮಾರ್ಗದರ್ಶನದಲ್ಲಿ ಈ ಸಾಹಸ ನೌಕಾ ಯಾನವನ್ನು ಕೈಗೊಂಡರು.
ಸೋಮವಾರ ದಿನ ಪುನೀತ್ ಸಾಗರ್ ಅಭಿಯಾನ ದಡಿ ಮಲ್ಪೆ ಬೀಚಿನಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಸಾಮಾಜಿಕ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶಿಸಲಾಯಿತು.
ಕಾರ್ಯಕ್ರಮವನ್ನು ಮಾಜಿ ಶಾಸಕ ಕೆ.ರಘುಪತಿ ಭಟ್ ನೆರವೇರಿಸಿ, ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಕರಾವಳಿ ಪೊಲೀಸ್ ಎಸ್ಪಿ ಅಂಶು ಕುಮಾರ್ ಹಾಗೂ ಕ್ಯಾಂಪ್ ಕಮಾಂಡೆಂಟ್ ಕಮಾಂಡರ್ ಕ್ಲೋಡಿ ಲೋಬೊ ಉಪಸ್ಥಿತರಿದ್ದರು.
ಮಂಗಳೂರು ನೇವಲ್ ಎನ್ಸಿಸಿ ಯುನಿಟ್ ಆಶ್ರಯದಲ್ಲಿ ಸೆ.13ರಿಂದ ಸೆ.22ರವರೆಗೆ ಉಡುಪಿ ಉದ್ಯಾವರದ ಹಿನ್ನೀರಿನಲ್ಲಿ ಓಶಿಯನ್ ಸೆಲಿಂಗ್ ಎಕ್ಸ್ಪೆಡಿಶನ್ ಶಿಬಿರ ನಡೆಯುತ್ತಿದ್ದು, ಕರ್ನಾಟಕ ಮತ್ತು ಗೋವಾದ ಒಟ್ಟು 6 ಯುನಿಟ್ನ 72 ಮಂದಿ ಎನ್ಸಿಸಿ ನೇವಲ್ ಕೆಡೆಟ್ಗಳು ಇಲ್ಲಿ ಸೈಲಿಂಗ್ ತರಬೇತಿ ಪಡೆಯುತ್ತಿದ್ದಾರೆ.