ಉಡುಪಿ, ಸೆ 20 (DaijiworldNews/MS): ಕಾರ್ಕಳದ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 24 ರಂದು ಸೌಜನ್ಯ ಪರ ನ್ಯಾಯಕ್ಕಾಗಿ ಆಗ್ರಹಿಸಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಆಯೋಜಿಸಲು ಉದ್ದೇಶಿಸಿರುವ ಪ್ರತಿಭಟನೆ ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಧರ್ಮಾಧಿಕಾರಿ ಡಾಕ್ಟರ್ ಡಿ ವಿರೇಂದ್ರ ಹೆಗ್ಗಡೆಯವರ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋದನಾಕಾರಿಯಾಗಿ ಮಾತನಾಡದಂತೆ ಮುಚ್ಚಳಿಕೆ ಬರೆಸಿಕೊಳ್ಳಬೇಕು ಮತ್ತು ಹೈಕೋರ್ಟ್ ನ ಆದೇಶವನ್ನು ಪಾಲಿಸಬೇಕು ಎಂದು ಆಗ್ರಹಿಸಿ ಶ್ರಿ ಕ್ಷೇತ್ರ ಧರ್ಮಸ್ಥಳ ಹಿತರಕ್ಷಣಾ ಸಮಿತಿ ಕಾರ್ಕಳ ವತಿಯಿಂದ ಉಡುಪಿ ಪೋಲಿಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾಧ್ಯಮ ದವರೊಂದಿಗೆ ಮಾತನಾಡಿದ ಹಿತರಕ್ಷಣಾ ಸಮಿತಿ ಪ್ರಮುಖರಾದ ಮಹೇಶ್ ತುಪ್ಪೆಕಲ್ಲು ಅವರು "ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಉಡುಪಿ ಜಿಲ್ಲೆಯಲ್ಲು ಧರ್ಮಸ್ಥಳ ಕ್ಷೇತ್ರದ ಮತ್ತು ಖಾವಂದರ ಮಾನಹಾನಿ ಮಾಡುವ ಕೆಲಸಗಳು ನಿರಂತರವಾಗಿ ನಡೆಯುತ್ತಲೇ ಬಂದಿವೆ. ಕಾನೂನಿನ ಆದೇಶ ಇದ್ದರೂ ಕೂಡಾ ಪೊಲಿಸ್ ಇಲಾಖೆ ಮತ್ತು ಜಿಲ್ಲಾಡಳಿತ ಸೂಕ್ತವಾದ ಕ್ರಮ ಕಯಗೊಳ್ಲಯ ವಿಫಲವಾಗಿದೆ. ಇದಕ್ಕಾಗಿ ಶಾಂತಿ ಪ್ರಿಯ ಧರ್ಮಸ್ಥಳದ ಅಭಿಮಾನಿಗಳು ಲಕ್ಷಾಂತರ ಮಂದಿ ಇದ್ದಾರೆ. ಇಂದು ಎಸ್ ಪಿ ಯವರಿಗೆ ಮನವಿ ಸಲ್ಲಿಸಿದ್ದೇವೆ. ಇಂತಹ ಕಾರ್ಯಕ್ರಮಗಳು ಬಂದ್ ಆಗಬೇಕಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆ ಆಗಬೇಕಾದ ಅನಿವಾರ್ಯತೆ ಇದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ನಾವು ಶಾಂತಿ ಪ್ರಿಯರು ಅಂತಹ ಕೆಲಸ ಮಾಡಲು ಸಿದ್ದರಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷಾಂತರ ಭಕ್ತಾದಿಗಳು ಇದ್ದು ಅವರು ಯಾವಾಗ ಸಿಡಿದೇಳುತ್ತಾರೆ ಎಂದು ಹೇಳುವುದು ಸಾಧ್ಯವಿಲ್ಲ. ಉಡುಪಿ ಜಿಲ್ಲೆಯಲ್ಲಿ ಜನತೆ ದಂಗೆ ಏಳುವ ಪರಿಸ್ಥಿತಿಯನ್ನು ಜಿಲ್ಲಾಡಳಿತ ನಿರ್ಮಾಣ ಮಾಡುವುದು ಬೇಡ ಎಂಬುವುದು ನಮ್ಮ ಬೇಡಿಕೆ" ಎಂದರು.
ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಟಾದಿಕಾರಿ ಡಾಕ್ಟರ್ ಅರುಣ್ ಕೆ ಅವರು ಹೈಕೋರ್ಟ್ ಆದೇಶದ ಪ್ರಕಾರ ಕಾನೂನು ಮತ್ತು ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ನೂರಾರು ಮಂದಿ ಅಭಿಮಾನಿಗಳು ಭಾಗವಹಿಸಿದ್ದರು.