ಮಂಗಳೂರು, ಸೆ 20 (DaijiworldNews/MS): ಹುಕ್ಕಾ ಬಾರ್ ಸೇರಿ ರಾಜ್ಯದಲ್ಲಿ ತಂಬಾಕು ಉತ್ಪನ್ನಗಳನ್ನು ನಿಷೇಧಿಸಲು ತಂಬಾಕು ನಿಷೇಧ ಕಾಯಿದೆಗೆ (ಕೋಟ್ಪಾ) ತಿದ್ದುಪಡಿ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಹುಕ್ಕಾ ಬಾರ್ ಗಳಿಂದ ಬಹಳಷ್ಟು ದುಷ್ಪರಿಣಾಮಗಳಾಗುತ್ತಿದ್ದು, ಇದನ್ನು ನಿಯಂತ್ರಣ ಮಾಡೋದು ಬಹಳ ಕಷ್ಟವಾಗಿದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಇದಕ್ಕೆ ಆಸ್ಪದ ನೀಡಬಾರದು ಹಾಗಾಗಿ ನಮ್ಮ ಕಾಯಿದೆಗೆ ತಿದ್ದುಪಡಿ ಮಾಡಿ ಬದಲಾವಣೆ ತರಲು ಬಯಸಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮೂವರು ಡಿಸಿಎಂಗಳ ಬಗ್ಗೆ ಚರ್ಚೆ ವಿಚಾರವಾಗಿ ,ಮಾತನಾಡಿದ ಅವರು ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇನ್ನು ವಿರೋಧ ಪಕ್ಷದವರು, ಚುನಾವಣಾ ಪೂರ್ವದಲ್ಲೂ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಟೀಕಿಸುತ್ತಿದ್ದರು. ನಾವು ಒಗ್ಗಟ್ಟಾಗಿ ಕೆಲಸ ಮಾಡಿ ಕೊನೆಗೆ ಏನಾಯ್ತು ಅಂತ ಗೊತ್ತಿದೆ ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಲು ಆಗಿಲ್ಲ, ಒಟ್ಟಾರೆ ಅವರಿಗೆ ಸುದ್ದಿಯಲ್ಲಿ ಇರಬೇಕು ಅನ್ನುವ ಹವ್ಯಾಸ ಆಗಿದೆ ಎಂದು ಲೇವಡಿ ಮಾಡಿದ್ದಾರೆ.