ಸುಳ್ಯ, ಏ 11(SM): ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಅವರ ಹತ್ಯೆ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಸಿಒಡಿಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷರಿಗೆ ಬಾಲಚಂದ್ರ ಕಳಗಿ ಅವರ ತಂದೆ ವೆಂಕಪ್ಪ ಗೌಡ ಹಾಗೂ ಅವರ ಪತ್ನಿ ರಮಾದೇವಿ ಹಾಗೂ ಊರಿನವರು ಸೇರಿಕೊಂಡು ಮನವಿ ಸಲ್ಲಿಸಿದ್ದಾರೆ.
ಬಾಲಚಂದ್ರ ಅವರು ಸಮಾಜದ ಎಲ್ಲಾ ವರ್ಗದವರಿಂದ ಪ್ರೀತಿಸುವ ಮತ್ತು ಗೌರವಿಸುವ ವ್ಯಕ್ತಿಯಾಗಿದ್ದರು. ಬಾಲಚಂದ್ರ ಕಳಗಿಯವರ ಬರ್ಭರ ಹತ್ಯೆಯಿಂದಾಗಿ ನಾವೆಲ್ಲರೂ ತೀವ್ರ ಆತಂಕ ಮತ್ತು ಭಯಕ್ಕೆ ಒಳಗಾಗಿದ್ದೇವೆ. ಮೂವರು ಕೊಲೆ ಆರೋಪಿಗಳನ್ನು ಬಂಧಿಸಿರುವುದಕ್ಕೆ ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಆದರೂ ಹತ್ಯೆ ಪ್ರಕರಣದ ಆರೋಪಿಗಳು ಮತ್ತು ತಮ್ಮ ಇಲಾಖಾ ಅಧೀನಾಧಿಕಾರಿಗಳು ಮಧ್ಯೆ ಇರುವ ಸಂಪರ್ಕವನ್ನು ಗಮನಿಸಿದಾಗ ಈ ಪ್ರಕರಣದ ನಿಷ್ಪಕ್ಷಪಾತ, ನ್ಯಾಯ ಸಮ್ಮತ ತನಿಖೆ ನಡೆಯಲಾರದು ಎನ್ನುವ ಸಂಶಯ ನಮಗಿದೆ ಎಂದರು.
ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದೇ ಆದಲ್ಲಿ ಜನ ಸಾಮಾನ್ಯರಾದ ನಮ್ಮ ಮೇಲೆ ಬೆದರಿಕೆ, ಒತ್ತಡ, ಹಲ್ಲೆ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಿಗೆ ಮೊಬೈಲ್ ಸಂಪರ್ಕ, ಆಹಾರ ವಿಚಾರಗಳಲ್ಲಿ ರಾಜಾತಿಥ್ಯ ಸಿಗುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಈ ಎಲ್ಲಾ ವಿಚಾರಗಳ ಹಿನ್ನಲೆಯಲ್ಲಿ ಪೋಲೀಸ್ ಇಲಾಖೆಯಿಂದ ಕೊಲೆ ಪ್ರಕರಣದ ತನಿಖೆಯು ನಿಷ್ಪಕ್ಷಪಾತವಾಗಿ, ನ್ಯಾಯ ಸಮ್ಮತವಾಗಿ ನಡೆಯಬಹುದೆಂದು ನಂಬಿಕೆ, ವಿಶ್ವಾಸ ನಮಗೆ ಇಲ್ಲವಾದ್ದರಿಂದ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಸಿ.ಓ.ಡಿ. ತನಿಕೆಗೆ ವಹಿಸಬೇಕೆಂದೂ ಮತ್ತು ಈ ಬಗ್ಗೆ ಸೂಕ್ತ ಶಿಪಾರಸ್ಸು ಮಾಡಬೇಕೆಂದು ಮನವಿಯಲ್ಲಿ ವಿನಂತಿಸಿಕೊಳ್ಳಲಾಗಿದೆ.