ಕಾಪು, ಸೆ 19 (DaijiworldNews/HR): ಉಡುಪಿಯ ಕಟಪಾಡಿ ಸಮೀಪದ ಮಣಿಪುರದಲ್ಲಿ ಪತ್ನಿಯೊಬ್ಬಳು ತನ್ನ ಪತಿಯ ಮೈಮೇಲೆ ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರು ಎರಚಿದ್ದು ಪತಿ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ.
ಪತಿ ಮೊಹಮ್ಮದ್ ಅಶ್ರಫ್ಗೆ ಪತ್ನಿ ಅಫ್ರೀನ್, ಅತ್ತೆ, ಮಾವ ಹಾಗೂ ಮತ್ತಿತರರು ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಘಟನೆಯಲ್ಲಿ ಮುಖ, ದೇಹ, ಎಡಗೈ, ಎದೆ, ಬೆನ್ನು ಬಲಕೈ ಸುಟ್ಟು ಹೋಗಿ ಗಂಭೀರವಾಗಿ ಗಾಯಗೊಂಡಿರುವ ಆಸಿಫ್ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸಿಫ್ ಬೇರೆ ಹುಡುಗಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಅನುಮಾನ ಹೊಂದಿದ್ದ ಅಫ್ರೀನ್, ಈ ಬಗ್ಗೆ ಆಗಾಗ್ಗೆ ಜಗಳವಾಡುತ್ತಿದ್ದಳೆನ್ನಲಾಗಿದೆ.
ಸೆ.17ರಂದು ಸಂಜೆ ಆಸಿಫ್ ಬಾತ್ ರೂಮಿನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಅಫ್ರೀನ್ ಹೊರಗಿನಿಂದ ಬಾಗಿಲು ಬಡಿದಿದ್ದು, ಆಸಿಫ್ ಬಾಗಿಲು ತೆರೆದಾಗ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರನ್ನು ಮೈ ಮೇಲೆ ಎರಚಿದ್ದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.