ಕುಂದಾಪುರ,ಏ 11 (MSP): ಸುಭದ್ರ, ಸ್ಥಿರ ಹಾಗೂ ದೇಶದ ಹಿತ ಕಾಯಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೇರಿಸಬೇಕಿದೆ. ಅದ್ಕಕಾಗಿ ನನಗೆ ಮತ ನೀಡಿ ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಗುರುವಾರ ಕುಂದಾಪುರದ ಕೋರ್ಟ್ನಲ್ಲಿ ಬಾರ್ ಅಸೋಸಿಯೇಶನ್ ಸದಸ್ಯರ ಬಳಿ ಮತಯಾಚಿಸಿದ ಬಳಿಕ ಮಾತನಾಡಿದರು. ದೇಶದ ಭದ್ರತೆ ದೃಷ್ಟಿಯಿಂದ ಮೋದಿ ಸರಕಾರವನ್ನು ಬೆಂಬಲಿಸಿ. ಮಹಾ ಘಟಬಂಧನ್ ಈಗಾಗಲೇ ಛಿದ್ರವಾಗಿದ್ದು, ಇದಕ್ಕೆ ರಾಜ್ಯದಲ್ಲಿರುವ ಮೈತ್ರಿ ಸರಕಾರದಲ್ಲಿರುವ ಗೊಂದಲಗಳೇ ಮೊದಲ ವೈಫಲ್ಯ ಎಂದ ಅವರು, ಉಡುಪಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಮತ್ತೊಮ್ಮೆ ಗೆಲ್ಲಿಸಿದರೆ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬಾರ್ ಅಸೋಸಿಯೇಶನ್ ಅಧ್ಯಕ್ಷ ನಿರಂಜನ್ ಹೆಗ್ಡೆ ಸಳ್ವಾಡಿ, ಪದಾಧಿಕಾರಿಗಳು, ಸದಸ್ಯರು, ವಕೀಲರು, ಬಿಜೆಪಿ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಪ್ರ. ಕಾರ್ಯದರ್ಶಿ ಭಾಸ್ಕರ ಬಿಲ್ಲವ, ಜಿಲ್ಲಾ ಪ್ರ. ಕಾರ್ಯದರ್ಶಿ ಸಂಧ್ಯಾ ರಮೇಶ್, ಯುವ ಮೋರ್ಚಾ ಅಧಕ್ಷ ಸತೀಶ್ ಪೂಜಾರಿ, ಪುರಭೆ ಸದಸ್ಯರಾದ ಮೋಹನ್ದಾಸ್ ಶೆಣೈ, ಪಭಾಕರ್, ಸಂತೋಷ್ ಶೆಟ್ಟಿ, ಗಿರೀಶ್ ದೇವಾಡಿಗ, ಅಶ್ವಿನಿ ಪ್ರದೀಪ್, ರೋಹಿಣಿ ಉದಯ ಕುಮಾರ್, ಶ್ವೇತಾ ಸತೋಷ್, ಮಹಿಳಾ ಮೋರ್ಚಾ ಅಧ್ಯಕ್ಷೆ ಗುಣರತ್ನಾ, ಮತ್ತಿತರರು ಉಪಸ್ಥಿತರಿದ್ದರು. ಬಾರ್ ಅಸೋಸಿಯೇಶನ್ ಪ್ರ. ಕಾರ್ಯದರ್ಶಿ ಪ್ರಮೋದ್ ಹಂದೆ ಸ್ವಾಗತಿಸಿದರು.
ರಿಕ್ಷಾ ನಿಲ್ದಾಣದಲ್ಲಿ ಶೋಭಾ ಮತಯಾಚನೆ
ಉಡುಪಿ - ಚಿಕ್ಕಮಗಳೂರು ಲೋಕಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಗುರುವಾರ ಕುಂದಾಪುರದ ವಿವಿಧ ರಿಕ್ಷಾ ನಿಲ್ದಾಣಗಳಲ್ಲಿ ಚಾಲಕರ ಬಳಿ ಮತಯಾಚಿಸಿದರು. ಹೊಸ ಬಸ್ ನಿಲ್ದಾಣ ಬಳಿಯ ರಿಕ್ಷಾ ನಿಲ್ದಾಣ, ಪುರಸಭಾ ಕಚೇರಿ ಎದುರಿನ ರಿಕ್ಷಾ ನಿಲ್ದಾಣಗಳಲ್ಲಿ ಶೋಭಾ ಅವರು ಮತ ಯಾಚಿಸಿ, ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ನಾನು ಯಾರ ವಿರುದ್ಧವೂ ವೈಯಕ್ತಿಕ ಆರೋಪ ಮಾಡಿಲ್ಲ. ನನ್ನ ಆಡಳಿತಾವಧಿಯಲ್ಲಿ ಆದಂತಹ ಅಭಿವೃದ್ಧಿ ವಿಚಾರಗಳ ಕುರಿತು ಹೇಳಿದ್ದೇನೆ. ಜಯಪ್ರಕಾಶ್ ಹೆಗ್ಡೆ ನಮ್ಮ ಪಕ್ಷದ ಹಿರಿಯ ನಾಯಕರು, ಅವರ ಬಗ್ಗೆ ಅಪಾರವಾದ ಗೌರವವಿದೆ ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.
ಕುಂದಾಪುರದಲ್ಲಿ ಪತ್ರಕರ್ತರೊಂದಿಗೆ ಶೋಭಾ ಮಾತುಕತೆ
ಕಳೆದ 70 ವರ್ಷಗಳಲ್ಲಿ ಆಗದಿರುವಂತಹ ಕೆಲಸವನ್ನು ನಾನು ಈ ೫ ವರ್ಷಗಳಲ್ಲಿ ಮಾಡಿದ್ದೇನೆ. ಕೆಂದ್ರೀಯ ವಿದ್ಯಾಲಯ, ಬ್ರಹ್ಮಾವರದ ಪಾಸ್ಪೋರ್ಟ್ ಕಚೇರಿ ಯಾರು ತಂದಿದ್ದು ಅಂತ ದಾಖಲೆಯಿದೆ. ನನ್ನ ಕಾಲದಲ್ಲಿ ಅದು ಜಾರಿಗೆ ತಂದಿದ್ದೇನೆ. ಇದಕ್ಕಾಗಿ ಸಾಕಷ್ಟು ಶ್ರಮಿಸಿದ್ದೇನೆ ಎಂದ ಅವರು, ಹೆಗ್ಡೆ ಅವರನ್ನು ಈಗಾಗಲೇ ಪ್ರಚಾರಕ್ಕೆ ಕರೆದಿದ್ದೇವೆ. ಹಲವೆಡೆಗಳಲ್ಲಿ ನಮ್ಮೊಂದಿಗೆ ಪ್ರಚಾರಕ್ಕೆ ಬಂದಿದ್ದಾರೆ. ಗೋಬ್ಯಾಕ್ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.
ನೋವಲ್ಲೂ ರಾಜಕೀಯ
ಮೀನುಗಾರಿಕಾ ಸಚಿವ ನಾಡಗೌಡ ಅವರು ಮೀನುಗಾರರು ಇಲ್ಲಿಯವರಲ್ಲ ಕಾರವಾರದವರು ಎಂದು ಹೇಳಿಕೆಗೆ ಪ್ರತಿಕ್ರಿಯಿಸಿದ ಶೋಭಾ ನೋವಲ್ಲೂ ರಾಜಕೀಯ ಮಾಡುವ ಅವರ ಹೀನ ಮನಸ್ಥಿತಯನ್ನು ಸೂಚಿಸುತ್ತಿದೆ. ಅವರಿಗೆ ಮೀನುಗಾರಿಕೆ ಬಗ್ಗೆ ಅಷ್ಟೇನೂ ಜ್ಞಾನವಿರಲಿಕ್ಕಿಲ್ಲ. ಇಂತಹ ಹೇಳಿಕೆಗೆ ಹೆಚ್ಚೇನು ಮಹತ್ವ ಕೊಡುವ ಅಗತ್ಯವಿಲ್ಲ ಎಂದ ಅವರು, ನಾಪತ್ತೆಯಾದ ಮೀನುಗಾರರ ಪತ್ತೆಗೆ ಕೇಂದ್ರ ನೌಕ ಪಡೆ ಹಾಗೂ ಕರಾವಳಿ ಕಾವಲು ಪಡೆ ಪೊಲೀಸರು ನಿರಂತರವಾಗಿ ಶ್ರಮವಹಿಸಿದ್ದಾರೆ. ಈಗ ನೌಕಪಡೆ ಹಾಗೂ ನುರಿತ ಮೀನುಗಾರರ ಜಂಟಿ ಸರ್ವೇಕ್ಷಣೆಗೂ ತಯಾರಾಗಿದೆ. ಈ ವಿಚಾರವಾಗಿ ಮಾತನಾಡುವ ಪ್ರಮೋದ್ ಮೀನುಗಾರರ ಪತ್ತೆಗೆ ಏನೂ ಸಹಕಾರ ನೀಡಿದ್ದಾರೆಂದು ಹೇಳಲಿ ಎಂದು ಪ್ರಶ್ನಿಸಿದರು.
ಪರೇಶ್ ಮೇಸ್ತ, ಪ್ರಶಾಂತ್ ಪೂಜಾರಿ, ರುದ್ರೇಶ್, ಶರತ್ ಮಡಿವಾಳ ಸಹಿತ ಎಲ್ಲ ಹತ್ಯೆ ಪ್ರಕರಣಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ನೊಂದ ಕುಟುಂಬಗಳಿಗೆ ನ್ಯಾಯ ಕೊಡಿಸುವಂತಗಹ ಕಾರ್ಯ ಮಾಡಲಿದ್ದೇವೆ ಎಂದರು.