ಉಡುಪಿ, ಸೆ 18 (DaijiworldNews/SM): ವಂಚನೆ ಪ್ರಕರಣದಲ್ಲಿ ಸಾಕಷ್ಟು ಸುದ್ದಿಯಲ್ಲಿರುವ ಚೈತ್ರಾ ಕುಂದಾಪುರ ಅವರ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಟಿಕೆಟ್ ಕೊಡಿಸುವ ನೆಪದಲ್ಲಿ ವಂಚನೆ ಎಸಗಿದ ಆರೋಪದಡಿ ಈಗಾಗಲೇ ಸಿಸಿಬಿ ಪೊಲೀಸರು ಚೈತ್ರಾ ಅವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಬಂಧನಕ್ಕೊಳಗಾಗಿ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ವಂಚನೆ ಆರೋಪ ಕೇಳಿಬಂದಿದೆ. ಬಟ್ಟೆ ಅಂಗಡಿ ಇಟ್ಟು ಕೊಡುವುದಾಗಿ ಲಕ್ಷಾಂತರ ರೂಪಾಯಿ ಪಡೆದ ವಂಚಿಸಿದ ಆರೋಪ ಸಂಬಂಧ ಉಡುಪಿಯಲ್ಲಿ ಎಫ್ಐಆರ್ ದಾಖಲಾಗಿದೆ. ಬಟ್ಟೆ ಅಂಗಡಿ ಇಟ್ಟು ಕೊಡುವುದಾಗಿ 5 ಲಕ್ಷ ರೂ. ಪಡೆದು ವಂಚನೆ ಎಸಗಿದ್ದಾಗಿ ಆರೋಪಿಸಿ ಬಿಜೆಪಿ ಕಾರ್ಯಕರ್ತ ಸುಧೀನ್ ಎಂಬುವರು ಬ್ರಹ್ಮಾವರ ವೃತ್ತ ವ್ಯಾಪ್ತಿಯ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಈ ನಡುವೆ ಮತ್ತೊಂದು ವಂಚನೆ ಪ್ರಕರಣ ದಾಖಲಿಸಿದ ಸುಧೀನ್ ಬಿಜೆಪಿ ಕಾರ್ಯಕರೇ ಆಗಿದ್ದಾರೆ. ಬಟ್ಟೆ ಅಂಗಡಿ ಉದ್ಯಮ ನಡೆಸಲು ನಿರ್ಧರಿಸಿದ್ದಾರೆ. ಆದರೆ ಇವರಿಗೂ ಚೈತ್ರಾ ಕುಂದಾಪುರ ಐದು ಲಕ್ಷ ವಂಚಿಸಿದ್ದಾರೆ ಎಂಬುದು ಇದೀಗ ಬೆಳಕಿಗೆ ಬಂದಿದೆ.