ಮಂಗಳೂರು, ಸೆ 18 (DaijiworldNews/HR): ಮಂಗಳೂರಿನ ಕುಲಶೇಖರದ ಕೋರ್ಡೆಲ್ ಚರ್ಚ್ (ಹೊಲಿಕ್ರಾಸ್ ಚರ್ಚ್) ಇದರ ಶತಮಾನೋತ್ತರ ಸುವರ್ಣ ಮಹೋತ್ಸವ ನಡೆಯಿತು.
ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ರೈ.ರೆ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸಂಭ್ರಮದ ಬಲಿ ಪೂಜೆಯನ್ನು ನೆರವೇರಿಸಿದರು. ಮಂಗಳೂರು ಸಿಟಿ ವಲಯದ ಮುಖ್ಯ ಗುರು ಫಾ. ಜೇಮ್ಸ್ ಡಿ ಸೋಜಾ, ಕೋರ್ಡೆಲ್ ಚರ್ಚ್ ನ ಪ್ರಧಾನ ಧರ್ಮಗುರು ಫಾ. ಕ್ಲಿಫರ್ಡ್ ಫೆರ್ನಾಂಡಿಸ್, ಸಹಾಯಕ ಗುರುಗಳಾದ ಫಾ. ಐವನ್ ಕೊರ್ಡರಿಯೋ ಮತ್ತು ಫಾ. ಪಾವ್ಲ್ ಡಿ ಸೋಜಾ ಮತ್ತು ಅತಿಥಿ ಗುರುಗಳು ಉಪಸ್ಥಿತರಿದ್ದರು. ಅನೇಕ ಮಂದಿ ಧಾರ್ಮಿಕ ಸಹೋದರರು, ಧರ್ಮ ಭಗಿನಿಯರು, ಕುಲಶೇಖರ ಚರ್ಚ್ ಮತ್ತು ಸುತ್ತ ಮುತ್ತಲ ಚರ್ಚ್ ಗಳ ಕ್ರೈಸ್ತ ಭಕ್ತಾದಿಗಳು ಈ ಸಂಭ್ರಮದಲ್ಲಿ ಭಾಗವಹಿಸಿದ್ದರು.
ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ದೇವರ ವಾಕ್ಯದ ಸಂದೇಶವನ್ನು ನೀಡಿ ಭಕ್ತಾದಿಗಳಿಗೆ ಪವಿತ್ರ ಶಿಲುಬೆಯ ಆಶೀರ್ವಾದ ಕೋರಿದರು.
ಬಲಿಪೂಜೆಯ ಬಳಿಕ ಅಭಿನಂದನಾ ಸಮಾರಂಭ ನಡೆಯಿತು. ಕುಲಶೇಖರ ಚರ್ಚ್ ನಲ್ಲಿ ಸೇವೆ ಸಲ್ಲಿಸಿದ ಧರ್ಮ ಗುರುಗಳು, ಸಹಾಯಕ ಗುರುಗಳು ಮತ್ತು ಈ ಚರ್ಚ್ ನಿಂದ ಧರ್ಮ ಗುರುಗಳಾದ ವರನ್ನು ಸೇರಿಸಿದಂತೆ ಒಟ್ಟು 103 ಮಂದಿಯನ್ನು ಸನ್ಮಾನಿಸಲಾಯಿತು. ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರನ್ನು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾಗಿ 5 ವರ್ಷಗಳನ್ನು ಪೂರ್ತಿಗೊಳಿಸಿದ ಪ್ರಯುಕ್ತ ಸನ್ಮಾನಿಸಲಾಯಿತು. ಬಿಷಪ್ ಅವರು ಕುಲಶೇಖರ ಚರ್ಚ್ ನಲ್ಲಿ ಸೇವೆ ಸಲ್ಲಿಸಿದ ಧರ್ಮ ಗುರುಗಳನ್ನು ಮತ್ತು ಧಾರ್ಮಿಕ ವ್ಯಕ್ತಿಗಳನ್ನು ಅಭಿನಂದಿಸಿದರು. ಮುಂಬರುವ ದಿನಗಳಲ್ಲಿ ಪವಿತ್ರ ಶಿಲುಬೆಗೆ ಸಮರ್ಪಿಸಿದ ಈ ಚರ್ಚ್ ಪುಣ್ಯ ಕ್ಷೇತ್ರವಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು. ಚರ್ಚ್ ನ ಧರ್ಮಗುರು ಫಾ. ಕ್ಲಿಫರ್ಡ್ ಫೆರ್ನಾಂಡಿಸ್ ಅವರು 150 ವರ್ಷಗಳ ಸಂಭ್ರಮಾಚರಣೆ ಯನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರ ಉಪಕಾರ ಸ್ಮರಿಸಿದರು.
ಸಮಾರಂಭದಲ್ಲಿ ಚರ್ಚ್ ನ ಉಪಾಧ್ಯಕ್ಷ ರೂತ್ ಕ್ಯಾಸ್ತಲಿನೊ , ಕಾರ್ಯದರ್ಶಿ ಅನಿಲ್ ಡೆಸಾ, 21 ಆಯೋಗಗಳ ಸಂಯೋಜಕ ಡೋಲ್ಫಿ ಡಿ ಸೋಜಾ, ಮಾಧ್ಯಮ ಸಂಯೋಜಕ ಎಲಿಯಾಸ್ ಫೆರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು.
ರಿಚಾರ್ಡ್ ಆಲ್ವಾರಿಸ್ ಕಾರ್ಯಕ್ರಮ ನಿರ್ವಹಿಸಿದರು. ಸಹಾಯಕ ಗುರು ಐವನ್ ಕೊರ್ಡೆರಿಯೋ ವಂದಿಸಿದರು. ಫಾ. ಪೌಲ್ ಡಿ’ಸೋಜಾ ಧನ್ಯವಾದ ಕಾರ್ಯಕ್ರಮ ನಡೆಸಿಕೊಟ್ಟರು.