ಮಂಗಳೂರು, ಏ 11 (MSP): " ಕಾಂಗ್ರೆಸ್ ಪಕ್ಷ ನೈಜ ಹಿಂದುತ್ವ ಸಿದ್ದಾಂತವನ್ನು ಪಾಲಿಸುತ್ತಿದ್ದು, ಸ್ವಾಮಿ ವಿವೇಕಾನಂದ, ಪರಮಹಂಸ ಮುಂತಾದ ಮಹಾನ್ ನಾಯಕರು ಬೋಧಿಸಿ ಪಾಲಿಸಿದಂತಹ ಸಿದ್ಧಾಂತಗಳನ್ನು ನಂಬುತ್ತಿದೆ. ಸ್ವಾಮಿ ವಿವೇಕಾನಂದರ ಹಿಂದುತ್ವ ಜಗತ್ತೇ ಒಪ್ಪಿಕೊಳ್ಳುತ್ತದೆ" ಎಂದು ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಅವರು ಏ.11ರ ಗುರುವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದರು. 'ಮತಯಾಚನೆ ಮೊದಲು ವೈಯಕ್ತಿಕವಾಗಿ ದೇವರನಾಮವನ್ನು ಜಪಿಸಿದ್ರೆ ಯಾರೇ ಅದನ್ನು ತಡೆಯುವಂತಿಲ್ಲ ಅದು ಅವರ ವೈಯಕ್ತಿಕ ವಿಚಾರ. ಮಿಥುನ್ ರೈ ಅವರು ಹನುಮಾನ್ ಚಾಲೀಸ್ ಹೇಳಿದರೆ ಅದು ತಪ್ಪಲ್ಲ. ಅವರು ನೈಜ ಹಿಂದೂ ಕುಟುಂಬದಿಂದ ಬಂದವರು ಅವರ ಧರ್ಮವನ್ನು ಪಾಲಿಸುವ ಎಲ್ಲಾ ಸ್ವಾತಂತ್ರ್ಯ ಅವರಿಗಿದೆ. ಹನುಮಾನ್ ಚಾಲೀಸ್ ಹೇಳಿದ ಪುಣ್ಯದಲ್ಲಿ ಹಿಂದುಗಳಿಗೆ ಪಾಲು ಸಿಗಬಹುದು, ಇನ್ನೂ ಮಿಥುನ್ ರೈ ಪ್ರಚಾರದ ಸಂದರ್ಭ ಮುಸ್ಲಿಂ ಪ್ರಾರ್ಥನೆ ಸಲ್ಲಿಸಿದ್ರೆ ಮುಸ್ಲಿಮರಿಗೆ ಅವರ ಪುಣ್ಯದಲ್ಲಿ ಪಾಲು ಸಿಗಬಹುದು. ಅದು ಅವರ ವೈಯಕ್ತಿಕ ವಿಚಾರವಾಗಿದೆ' ಎಂದರು .
ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಿ, ಎಲ್ಲಾ ಸಮುದಾಯದವರನ್ನು ಸಹೋದರತೆಯಿಂದ ಕಾಣುವುದೇ ನಿಜವಾದ ಹಿಂದುತ್ವ. ಇದೇ ಮಾತನ್ನು ಸ್ವಾಮಿ ವಿವೇಕನಾಂದ ಚಿಕಾಗೋದಲ್ಲಿ ಹೇಳಿರುವಂತದ್ದು ಎಂದು ಹೇಳಿದರು.
ಬಿಜೆಪಿ ನಕಲಿ ಹಿಂದುತ್ವ ಅವರಿಗೆ ಉಲ್ಟಾ ಹೊಡೆಯುತ್ತಿದೆ. ನಮ್ಮ ಅಭ್ಯರ್ಥಿ ಮಿಥುನ್ ರೈ ಅವರಿಗೆ ದಿನೇ ದಿನೇ ಜನ ಬೆಂಬಲ ಹೆಚ್ಚಾಗುತ್ತಿದ್ದು ಅವರು ಬಹುಮತದಿಂದ ಗೆಲ್ಲಲಿದ್ದಾರೆ. ಸತ್ಯ ನ್ಯಾಯದ ಪರ ಹೋರಾಟದ ಮಾಡುವ ಭರವಸೆಯನ್ನು ಜಿಲ್ಲೆಯ ಜನರಿಗೆ ಮಿಥನ್ ರೈ ನೀಡಿದ್ದಾರೆ ಎಂದರು.
ಇನ್ನು ಬಿಜೆಪಿ ಪ್ರಣಾಳಿಕೆಯ ಬಗ್ಗೆ ಟೀಕೆ ವ್ಯಕ್ತಪಡಿಸಿದ ಅವರು ಕಳೆದ ಬಾರಿಯ ಪ್ರಣಾಳಿಕೆಯನ್ನು ಈ ಬಾರಿಯೂ ಬಿಜೆಪಿ ಕಟ್ ಪೇಸ್ಟ್ ಮಾಡಿದ್ದು, ನಾಲ್ಕು ಗೋಡೆ ಮಧ್ಯೆ ಕುಳಿತು ರಚನೆ ಮಾಡಿರುವಂತದ್ದಾಗಿದೆ. ಬಿಜೆಪಿಯ ಪ್ರಣಾಳಿಕೆಯನ್ನು ನಂಬುವಂತಿಲ್ಲ ಎಂದರು.