ಉಳ್ಳಾಲ, ಸೆ 16 (DaijiworldNews/AK): ನಿಫಾ ವೈರಸ್ ಆತಂಕ ಹಿನ್ನೆಲೆಯಲ್ಲಿ ಕೇರಳದ ಮೂರು ಜಿಲ್ಲೆಗಳಿಂದ ಬರುವ ವಾಹನಗಳನ್ನು ಕೇರಳ-ಕರ್ನಾಟಕ ಗಡಿಭಾಗ ತಲಪಾಡಿಯಲ್ಲಿ ಇಂದು ದ.ಕ ಜಿಲ್ಲಾ ಆರೋಗ್ಯ ಇಲಾಖೆ ನಿರ್ದೇಶನದಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು ಎಂದು ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಅಧಿಕಾರಿ ಡಾ.ಗೋಪಿ ಪ್ರಕಾಶ್ ತಿಳಿಸಿದರು.
ಇಂದು ಬೆಳಿಗ್ಗೆ 9 ಗಂಟೆಯಿಂದ ತಲಪಾಡಿಯಲ್ಲಿರುವ ಕಿಯೋಸ್ಕ್ ನಲ್ಲಿ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರ ನೇತೃತ್ವದ ತಂಡ ಕೇರಳದ ಮೂರು ಜಿಲ್ಲೆಗಳಿಂದ ಬರುವ ವಾಹನಗಳಲ್ಲಿರುವ ಪ್ರಯಾಣಿಕರ ಜ್ವರ ತಪಾಸಣೆ ನಡೆಸಲಾಯಿತು.
ಕೆ.ಎಲ್ 9, ಕೆ.ಎಲ್ 10, ಕೆ.ಎಲ್ 11 ಕೋಝಿಕ್ಕೋಡ್, ಕ್ಯಾಲಿಕಟ್ ಮತ್ತು ವಡಕ್ಕರ ಜಿಲ್ಲೆಗಳಿಂದ ಬಂದ ಸುಮಾರು 60 ವಾಹನಗಳ ಪ್ರಯಾಣಿಕರನ್ನು ತಪಾಸಣೆ ನಡೆಸಿತು. ವಾಹನಗಳನ್ನು ತಡೆದು ನಿಲ್ಲಿಸಿ ಪ್ರಯಾಣಿಕರ ಥರ್ಮಲ್ ಸ್ಕ್ಯಾನ್ ಮೂಲಕ ಪರಿಶೀಲನೆ ನಡೆಸಿದೆ. ಸಂಜೆಯವರೆಗಿನ ತಪಾಸಣೆಯಲ್ಲಿ ಜ್ವರ ಸಂಬಂಧಿಸಿದ ಯಾವುದೇ ಪ್ರಯಾಣಿಕರ ಕಂಡುಬಂದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಇಲಾಖೆಯ ಸರ್ವೇಕ್ಷಣಾ ಅಧಿಕಾರಿ ಡಾ.ನವೀನ್ ಚಂದ್ರ ಕುಲಾಲ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಸುಜಯ್ ಭಂಡಾರಿ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಡಾ. ಗೋಪಿ ಪ್ರಕಾಶ್, ಡಾ.ಅನಿತಾ ಹಾಗೂ ಆಶಾ ಕಾರ್ಯಕರ್ತೆಯರು ಭಾಗಿಯಾಗಿದ್ದರು.
ಜ್ವರ ಇರುವುದು ಕಂಡುಬಂದಲ್ಲಿ ಅಂತಹವರ ಮೊಬೈಲ್ ನಂಬರ್, ದಾಖಲೆಗಳನ್ನು ಪಡೆದುಕೊಳ್ಳಲಾಗುವುದು. ಆ ಮೂಲಕ ಅಂತಹ ವ್ಯಕ್ತಿಗಳನ್ನು ಟ್ರಾಕಿಂಗ್ ನಲ್ಲಿ ಇಡಲಾಗುವುದು. ವಡಕ್ಕಾರ ಜಿಲ್ಲೆಯಲ್ಲಿ ಕ್ವಾರಂಟೈನ್ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ಕೇರಳದ ಪ್ರಯಾಣಿಕರು ತಪಾಸಣೆಗೆ ವಿರೋಧಿಸುತ್ತಾರೆ. ಆದರೂ ಒತ್ತಾಯಪೂರ್ವಕವಾಗಿ ತಪಾಸಣೆಯನ್ನು ನಡೆಸಲೇಬೇಕಾಗಿದೆ. ಮೂರು ಜಿಲ್ಲೆಗಳನ್ನು ಹೊರತುಪಡಿಸಿಯೂ , ಕೇರಳದಿಂದ ಬರುವ ಇತರೆ ವಾಹನಗಳ ತಪಾಸಣೆಯೂ ನಡೆಸಲಾಗಿದೆ ಎಂದು ಆರೋಗ್ಯ ಅಧಿಕಾರಿ ಹೇಳಿದರು.