ಮಂಗಳೂರು, ಏ 11 (MSP): ನಗರದ ಮೀನುಗಾರಿಕಾ ಬಂದರಿನಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವವರು, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ರಾಜ್ಯಗಳ ಜನರು. ಇದೀಗ ಅಲ್ಲಿ ಲೋಕಸಭೆಯ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಮತದಾನ ಮಾಡಲೆಂದು ಅವರೆಲ್ಲ ಮತದಾನಕ್ಕಾಗಿ ತಮ್ಮ ರಾಜ್ಯಗಳಿಗೆ ಮರಳಿದ್ದರಿಂದ ದಕ್ಕೆಯಲ್ಲಿ ಹೆಚ್ಚಿನ ಬೋಟುಗಳು ಲಂಗರು ಹಾಕಿದ್ದು, ಮೀನುಗಾರಿಕೆ ಬಹುತೇಕ ಸ್ಥಗಿತಗೊಂಡಿದೆ.
ಹಳೆ ಬಂದರು ದಕ್ಕೆಯಲ್ಲಿ 400 ಆಳ ಸಮುದ್ರ ಮೀನುಗಾರಿಕೆ ಬೋಟುಗಳಲ್ಲಿ ಕೆಲಸ ಮಾಡುವ ಸುಮಾರು 4,000ದಷ್ಟು ಮೀನುಗಾರ ಕಾರ್ಮಿಕರು ಹೆಚ್ಚಾಗಿ ಆಂಧ್ರ, ತಮಿಳುನಾಡು, ಒಡಿಶಾ ರಾಜ್ಯಗಳಿಂದ ಬಂದವರು . ಪ್ರಥಮ ಹಂತದ ಚುನಾವಣೆ ಎ. 11ರಂದು ನಡೆಯಲಿದ್ದು, ಹೀಗಾಗಿ ಮತದಾನಕ್ಕೆ ತೆರಳೆಂದು ಹೆಚ್ಚಿನ ಕಾರ್ಮಿಕರು ರಜೆ ಹಾಕಿ ತಮ್ಮ ಊರಿನತ್ತ ಮರಳಿದ್ದಾರೆ.
ಲೋಕಸಭಾ ಚುನಾವಣೆ ಎ. 11ರಿಂದ ಮೇ 19ರ ವರೆಗೆ 7 ಹಂತಗಳಲ್ಲಿ ನಡೆಯಲಿದೆ. ಎ. 11ರಂದು ಮೊದಲ ಹಂತದಲ್ಲಿ ಆಂಧ್ರ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳಲ್ಲಿ, 2ನೇ ಹಂತದಲ್ಲಿ ಎ. 18ರಂದು ತಮಿಳುನಾಡು, ಒಡಿಶಾ, ಕರ್ನಾಟಕದಲ್ಲಿ ಮತದಾನವಿದೆ. ಎ. 23ಕ್ಕೆ 3ನೇ ಹಂತದ ಚುನಾವಣೆ. ಒಡಿಶಾ ರಾಜ್ಯದಲ್ಲಿ ಮೊದಲ ಮೂರೂ ಹಂತಗಳಲ್ಲಿ ಚುನಾವಣೆ ಇದೆ. ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯೂ ನಡೆಯುತ್ತಿದೆ. ಮೀನುಗಾರ ಕಾರ್ಮಿಕರ ಕೊರತೆ ಎ. 25ರ ವರೆಗೂ ಇರಬಹುದು ಎಂದು ಮಂಗಳೂರಿನ ಟ್ರಾಲ್ಬೋಟ್ ಮೀನುಗಾರರ ಸಂಘದ ಮೂಲಗಳು ತಿಳಿಸಿವೆ.