ಮಂಗಳೂರು, ಸೆ 16 (DaijiworldNews/HR): ಹಣವೇ ಬಿಜೆಪಿಯಲ್ಲಿ ಪ್ರಧಾನ ಆಲ್ಲ, ಹಾಗಿದ್ದರೆ ನೂರಾರು ಬಡ ಕಾರ್ಯಕರ್ತರು ಬಿಜೆಪಿಯಲಲಿ ಸಂಸದರು, ಶಾಸಕರು ಆಗುತ್ತಿರಲಿಲ್ಲ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಬೈಂದೂರು ಎಂಎಲ್ಎ ಬಿಜೆಪಿ ಟಿಕೆಟ್ಗಾಗಿ ಚೈತ್ರಾ ಕುಂದಾಪುರ ಹಣ ಪಡೆದುಕೊಂಡಿರುವ ಪ್ರಕರಣದ ಕುರಿತು ಮಾತನಾಡಿದ ಅವರು, ಬಿಜೆಪಿಯಲ್ಲಿ ಹಣವೇ ಪ್ರಧಾನವಾಗಿದ್ದರೆ ಬೈಂದೂರಿನ ಟಿಕೆಟ್ ಬಡ ಕಾರ್ಯಕರ್ತ ಗುರುರಾಜ್ ಶೆಟ್ಟಿ ಗಂಟಿಹೊಳೆ, ಸುಳ್ಯದ ಟಿಕೆಟ್ ಬಡ ಮಹಿಳೆ ಭಾಗೀರಥಿ ಮುರುಳ್ಯ ಅವರಿಗೆ ಸಿಗುತ್ತಿರಲಿಲ್ಲ. ಕೋಟಾ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಅವರು ನಾಯಕರಾಗುತ್ತಿರಲಿಲ್ಲ ಎಂದರು.
ಇನ್ನು ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರನ್ನು ಮೋಸ ಮಾಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿಯಂಥ ಬುದ್ದಿವಂತರ ಜಿಲ್ಲೆಯ ಇವರೇ ಮೋಸ ಹೋಗಿದ್ದಾರೆ. ಅವರು ನೇರವಾಗಿ ಫೋನ್ ಮಾಡಿದರೂ ಬಿಜೆಪಿ ನಾಯಕರು ಸಂಪರ್ಕಕ್ಕೆ ಸಿಗುತ್ತಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೇ ಅವರ ಜೊತೆ ತುಳು ಭಾಷೆಯಲ್ಲೇ ಮಾತಾಡುತ್ತಿದ್ದರು. ನಳಿನ್ ಕುಮಾರ್ ಕಟೀಲ್, ಕೋಟಾ ಶ್ರೀನಿವಾಸ ಪೂಜಾರಿಯೂ ಮಾತಾಡುತ್ತಿದ್ದರು ಎಂದಿದ್ದಾರೆ.
ಈ ಪ್ರಕರಣದ ಬಗ್ಗೆ ಸತ್ಯ ಬಹಿರಂಗ ಆಗಬೇಕು, ಸಮಗ್ರ ತನಿಖೆ ಆಗಬೇಕು. ಯಾರೇ ಇದ್ದರೂ ಸೂಕ್ತ ತನಿಖೆ ನಡೆದು ಕ್ರಮ ಆಗಲಿ. ಯಾರದ್ದೋ ಹೆಸರು ಕೇಳಿ ಬರುತ್ತಿದೆ ಅನ್ನೋದು ಬೇರೆ. ಮೊದಲು ಸಮಗ್ರ ತನಿಖೆ ಆಗಲಿ ಎಂದರು.
ಮೈತ್ರಿ ವಿಚಾರ ಮಾತನಾಡಿದ ಅವರು, ನಾವು ಪರಿಷತ್ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಚರ್ಚೆ ಆಗುತ್ತಿದೆ, ಆದರೆ ಅಂತಿಮ ಆಗಿಲ್ಲ. ಹಾಗಾಗಿ ಅದು ವರಿಷ್ಠರ ತೀರ್ಮಾನ, ನಾವು ಯಾವುದೇ ಚುನಾವಣೆಗೆ ನಮ್ಮ ಹಂತದಲ್ಲಿ ಸಿದ್ಧವಾಗುತ್ತಿದ್ದೇವೆ. ಈ ಮೈತ್ರಿ ವಿಚಾರದಲ್ಲಿ ವರಿಷ್ಠರ ನಡೆ ಮುಖ್ಯವಾಗಿದೆ ಎಂದರು.
ಬಿಜೆಪಿಯ ಮಾಜಿ ಕಾರ್ಪೋರೆಟರ್ಗಳು, ಸದಸ್ಯರು ಕಾಂಗ್ರೆಸ್ ಸೇರಿದ್ದಾರೆ. ಬೆಲ್ಲ ಇದ್ದ ಕಡೆ ಇರುವೆ ಹೋಗುವುದು ಸ್ವಾಭಾವಿಕ. ಕೆಲವರು ಅಧಿಕಾರದ ಕಾರಣಕ್ಕೆ ಇಲ್ಲಿಂದ ಅಲ್ಲಿಗೆ ಹೋಗಿದ್ದಾರೆ. ನಾವು ಸಚಿವರು, ಶಾಸಕರನ್ನೇ ಕರೆದುಕೊಂಡು ಹೋದರೂ ಅಧಿಕಾರ ಉಳಿಸಿಕೊಳ್ಳಲು ಆಗಿಲ್ಲ. ಈಗ ಅವರು ಕಾರ್ಪೋರೆಟರ್ಗಳನ್ನು ಕರೆದುಕೊಂಡು ಏನಾಗುತ್ತದೆ ಎಂದಿದ್ದಾರೆ.
ಹುಬ್ಬಳ್ಳಿ ಈದ್ಗಾ ಮೈದಾನ ಅಲ್ಲ, ಅದು ನಗರ ಪಾಲಿಕೆಯ ಮೈದಾನವಾಗಿದೆ. ಅದರ ವಿರುದ್ಧ ಅಂಜುಮನ್ ಇಸ್ಲಾಂ ಹೈಕೋರ್ಟ್ಗೆ ಹೋಗಿದ್ದೇ ತಪ್ಪು. ಅಲ್ಲಿ ಅನುಮತಿ ಕೊಡುವುದು ಬಿಡುವುದು ಪಾಲಿಕೆಗೆ ಬಿಟ್ಟ ವಿಚಾರ ಎಂದು ಸಿಟಿ ರವಿ ಹೇಳಿದರು. ಕಾಂಗ್ರೆಸ್ ಬಂದಾಗ ಈ ಕೋಮುವಾದಿ ಶಕ್ತಿಗಳು ಎದ್ದು ಕೂರುತ್ತವೆ. ಈ ನಡುವೆ ಗಣೇಶೋತ್ಸವಕ್ಕೆ ಅನುಮತಿ ಕೊಡಬೇಡಿ ಅಂತ ಕೋರ್ಟ್ಗೆ ಹೋಗಲು ಇವರು ಯಾರು ಎಂದು ಪ್ರಶ್ನಿಸಿದ್ದಾರೆ.