ಉಳ್ಳಾಲ, ಸೆ 15 (DaijiworldNews/MS): ಶ್ರಾವಣ ಅಮವಾಸ್ಯೆಯ ಶುಭ ಶುಕ್ರವಾರದಂದು ಉಳ್ಳಾಲ ತಾಲೂಕಿನ ಪುರಾಣ ಪ್ರಸಿದ್ಧ ಸೋಮೇಶ್ವರ, ಸೋಮನಾಥ ಕ್ಷೇತ್ರದಲ್ಲಿ ಸಹಸ್ರಾರು ಮಂದಿ ಭಕ್ತಾಧಿಗಳು ಪವಿತ್ರ ತೀರ್ಥ ಸ್ನಾನಗೈದು ಪುನೀತರಾದರು.
ಸೋಮೇಶ್ವರ,ಸೋಮನಾಥ ಕ್ಷೇತ್ರದಲ್ಲಿ ಆಚರಿಸಲ್ಪಡುವ ಐದು ವಿಶೇಷ ಪರ್ವಗಳಲ್ಲಿ ಶ್ರಾವಣ ಅಮವಾಸ್ಯೆಯ ತೀರ್ಥ ಸ್ನಾನವು ತುಂಬಾ ಮಹತ್ವದ್ದಾಗಿದೆ. ಶ್ರಾವಣ ಅಮವಾಸ್ಯೆಯಂದು ಸೋಮೇಶ್ವರದ ಪೃಕೃತಿ ರಮಣೀಯ ಕಡಲ ತೀರಕ್ಕೆ ಸಹಸ್ರಾರು ಭಕ್ತಾಧಿಗಳು ಬಂದು ತೀರ್ಥ ಸ್ನಾನ ಮಾಡುತ್ತಾರೆ.ಇಲ್ಲಿನ ವಾಡಿಕೆ ಪ್ರಕಾರ ಮೊದಲು ದೇವಸ್ಥಾನದ ಗದಾ ತೀರ್ಥ ಕೆರೆಯ ಹಿನ್ನೀರಿನಲ್ಲಿ ಸ್ನಾನಗೈದು ಬಳಿಕ ಸಮುದ್ರ ಸ್ನಾನ ಮಾಡಿದರೆ ಪಾಪ ನಾಶವಾಗಿ ಪುಣ್ಯ ಪ್ರಾಪ್ತಿಯಾಗುವುದೆಂಬ ನಂಬಿಕೆಯಿದೆ. ವೈಜ್ನಾನಿಕ ದೃಷ್ಟಿಯಲ್ಲೂ ಕೆರೆ ಸ್ನಾನದ ಬಳಿಕ ಸಮುದ್ರ ಸ್ನಾನಗೈದರೆ ಉಪ್ಪುನೀರಿಗೆ ಚರ್ಮ ವ್ಯಾಧಿಗಳು ದೂರ ಆಗುತ್ತವೆ ಎಂಬ ನಂಬಿಕೆಯಿಂದ ಅನೇಕ ಭಕ್ತಾಧಿಗಳು ಇಲ್ಲಿ ಬಂದು ತೀರ್ಥ ಸ್ನಾನಗೈದು ಪುನೀತರಾಗುತ್ತಾರೆ.
ಸಮುದ್ರ ಸ್ನಾನದ ಮೊದಲು ಭಕ್ತಾಧಿಗಳು ಕಡಲರಾಜನಿಗೆ ಅಡಿಕೆ,ವೀಳ್ಯವನ್ನ ಸಮರ್ಪಿಸುತ್ತಾರೆ.ತೀರ್ಥ ಸ್ನಾನದ ಬಳಿಕ ಸೋಮನಾಥನಿಗೆ ವಿಶೇಷ ಸೇವೆಗಳನ್ನ ನೀಡಿ ಕೃತಾರ್ಥರಾಗುತ್ತಾರೆ