ಪುತ್ತೂರು, ಎ11(SS): ರಫೇಲ್ ಡೀಲ್ ಕುರಿತು ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿರುವುದು ನೈತಿಕ ಗೆಲುವು. ಮತ್ತೊಮ್ಮೆ ತನಿಖೆಯಾದಾಗ ಮೋದಿ ಜೈಲಿಗೆ ಹೋಗುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ರಕ್ಷಣೆಗೆ ಸಂಬಂಧಿಸಿದ ಯುದ್ಧ ವಿಮಾನ ಖರೀದಿಯಲ್ಲಿ ವಂಚಿಸಿದವರು ದೇಶ ರಕ್ಷಕರೇ...? ಅಥವಾ ಭಕ್ಷಕರೇ..? ಸೈನಿಕರ ವಿಚಾರವನ್ನು ಬಳಸಿಕೊಂಡು ಚುನಾವಣೆಯಲ್ಲಿ 22 ಸೀಟು ಗೆಲ್ಲುವುದು ಖಚಿತ ಎನ್ನುವ ಹೇಳಿಕೆಯನ್ನು ಯಡಿಯೂರಪ್ಪ ನೀಡಿದ್ದಾರೆ. ಇವರೆಲ್ಲಾ ದೇಶ ರಕ್ಷಕರೇ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿಯನ್ನು ಮೆಚ್ಚಿಸುವ ಸಲುವಾಗಿ ಜಿಲ್ಲೆಯವರಾದ ಮೂವರು ಸಂಸದರು ವಿಜಯ ಬ್ಯಾಂಕ್ನ್ನು ಬಲಿಕೊಟ್ಟಿದ್ದಾರೆ. ಈ ಕುರಿತು ಈ ಸಂಸದರು ಜನತೆಗೆ ಉತ್ತರ ನೀಡಲಿ. ಇಲ್ಲದಿದ್ದರೆ ಎ. 13ರಂದು ನರೇಂದ್ರ ಮೋದಿಯವರ ಎದುರು ಕಾರ್ಯಕರ್ತರನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡುತ್ತೇವೆ. ವಿಜಯ ಬ್ಯಾಂಕ್ ಮುಳುಗಿಸಿದ್ದು ಕಾಂಗ್ರೆಸ್ ಎಂದು ಕೆಲವು ನಿವೃತ್ತ ಸಿಬಂದಿ ಆರೋಪಿಸಿರುವುದು ಬಿಜೆಪಿಗೆ ಬೆಂಬಲಿಸುವ ಸಲುವಾಗಿ. ಇದಕ್ಕೆ ಸರಿಯಾದ ದಾಖಲೆಗಳನ್ನು ಕೊಟ್ಟು ಅವರು ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.
ಕರ್ನಾಟಕದ 17 ಸಂಸದರು ಇದ್ದರೂ ರಾಜ್ಯಕ್ಕೆ ಕೇಂದ್ರದಿಂದ ಏನೂ ಅನುದಾನ ಸಿಕ್ಕಿಲ್ಲ. ಒಮ್ಮೆ ಚಾಯ್ವಾಲಾ, ಮತ್ತೂಮ್ಮೆ ಚೌಕೀದಾರ್ ಎನ್ನುತ್ತಾ ಜನರನ್ನು ವಂಚಿಸುವ ಮೋದಿ ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ದನ ರೆಡ್ಡಿ, ರೇಣುಕಾಚಾರ್ಯ ಮೊದಲಾದವರು ಚೌಕೀದಾರರೇ...? ಎಂಬುದನ್ನು ತಿಳಿಸಬೇಕು. ವಂಚನೆ ಮಾಡಿ ಜೈಲಿಗೆ ಹೋದವರು ಚೌಕಿದಾರರೇ..? ಎನ್ನುವುದಕ್ಕೆ ಉತ್ತರಿಸಬೇಕು ಎಂದು ಎಚ್ಚರಿಸಿದರು.