ಉಡುಪಿ, ಏ 11 (MSP): ಚುನಾವಣಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ ಬುಕ್ ನಲ್ಲಿ ಮತಯಾಚನೆಯ ಫೋಟೋ ಅಪ್ಲೋಡ್ ಮಾಡಿ, ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ ವಿರುದ್ದ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮೃತ್ ಶೆಣೈ ಏ.5ರಿಂದ ಏ.6 ರ ಮಧ್ಯಾವಧಿಯಲ್ಲಿ ತಮ್ಮ ಫೇಸ್ಬುಕ್ ಖಾತೆಗೆ ಮತಯಾಚನೆ ಪೋಟೋ ಹಾಕಿಕೊಂಡಿದ್ದರು. ಈ ಬಗ್ಗೆ ಚುನಾವಣಾ ಆಯೋಗದ ಯಾವುದೇ ಪೂರ್ವಾನುಮತಿ ಇರಲಿಲ್ಲ. ಉಡುಪಿ ಚಿಕ್ಕಮಗಳೂರು ಲೋಕಾಸಭಾ ಕ್ಷೇತ್ರದ ಪ್ಲೈಯಿಂಗ್ ಸ್ಕ್ವಾಡ್ ಟೀಂ 2 ರ ಅಧಿಕಾರಿ ರಾಮ ನರಸಿಂಹ ಹೆಗಡೆ ಕೊಟ್ಟ ದೂರಿನಂತೆ ಪ್ರಕರಣ ದಾಖಲಾಗಿದೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರನಾಗಿ ಕಣಕ್ಕಿಳಿದು ಪಕ್ಷಕ್ಕೆ ಸೆಡ್ಡು ಹೊಡೆದಿದ್ದ ಎಐಸಿಸಿ ಸದಸ್ಯ ಅಮೃತ್ ಶಣೈ ಅವರನ್ನು ಕಾಂಗ್ರೆಸ್ ಪಕ್ಷ ಇತ್ತೀಚೆಗೆ ತಾನೆ ಅಮಾನತು ಮಾಡಿತ್ತು. ಉದ್ಯಮಿಯಾಗಿರುವ ಅಮೃತ್ ಶೆಣೈ ಅವರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದು , ಮಾತ್ರವಲ್ಲದೆ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ನಿಂದ ಕಣಕ್ಕಿಳಿದಿರುವ ಬಗ್ಗೆ ಸಿಡಿದೆದ್ದು ಪಕ್ಷೇತರನಾಗಿ ಕಣಕ್ಕಿಳಿದಿದ್ದರು.