ಉಡುಪಿ, ಸೆ.13 (DaijiworldNews/SM): ವಂಚನೆ ಪ್ರಕರಣದಲ್ಲಿ ಬಂಧಿತಳಾಗಿರುವ ಚೈತ್ರಾಳಿಗೆ ನಾನು ಯಾವುದೇ ಆಶ್ರಯವಾಗಲಿ, ರಕ್ಷಣೆಯಾಗಲಿ ನೀಡಿಲ್ಲ. ಇದೆಲ್ಲವೂ ಸುಳ್ಳು ಸುದ್ದಿ ಎಂದು ಯುವ ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಮ್ ಸ್ಪಷ್ಟಪಡಿಸಿದ್ದಾರೆ.
ಆಕೆಗೆ ನಾನು ಕಳೆದ ಏಳು ದಿನಗಳಿಂದ ಆಶ್ರಯ ನೀಡಿದ್ದೇನೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಸತ್ಯಕ್ಕೆ ದೂರವಾದ ವಿಚಾರ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಾಗಿರುವುದು ಸೆ. 8ರಂದು. ಹಾಗಾದರೆ ಏಳು ದಿನ ಹೇಗೆ ಆಗುತ್ತೆ ಎಂದು ಅಂಜುಂ ಪ್ರಶ್ನಿಸಿದ್ದಾರೆ. ಹಲವು ವರ್ಷಗಳ ಹಿಂದೆ ನಾನು ಮತ್ತು ಆಕೆ ಸ್ಥಳೀಯ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡಿದ್ದೇವೆ. ಅದು ಬಿಟ್ಟ ಬಳಿಕ ಆಕೆಯೊಂದಿಗೆ ಯಾವುದೇ ಸಂಬಂಧ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸುದ್ದಿವಾಹಿಗಳಲ್ಲಿ ಬರುತ್ತಿರುವ ಸುಳ್ಳು ಸುದ್ದಿಗಳಿಂದ ನನಗೆ ಮಾನಸಿಕ ಹಿಂಸೆಯಾಗುತ್ತಿದೆ. ಇದರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಅಂಜುಂ ಅವರು ಸ್ಪಷ್ಟಪಡಿಸಿದ್ದಾರೆ.