ಕುಂದಾಪುರ, ಸೆ 13 (DaijiworldNews/HR): ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಅಪಾರ. ಉತ್ತಮ ಶಿಕ್ಷಕರನ್ನು ಗುರುತಿಸಿ ಗೌರವಿಸಿದಾಗ ಶಿಕ್ಷಕರ ಜವಾಬ್ಧಾರಿ ಹೆಚ್ಚುತ್ತದೆ ಎಂದು ಕುಂದಾಪುರ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶೇಡಿಮನೆ ಗೋಪಾಲ ಶೆಟ್ಟಿ ಹೇಳಿದರು.
ಯಡಾಡಿ ಮತ್ಯಾಡಿ ಎಕ್ಸಲೆಂಟ್ ಹಾಗೂ ಲಿಟಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನ ಪ್ರಯುಕ್ತ "ಗುರುವಂದನಾ" ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸುಜ್ಞಾನ್ ಎಜ್ಯಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಭರತ್ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂದರೆ ಅವನ ಹಿಂದೆ ಪ್ರಮುಖ ಪಾತ್ರ ವಹಿಸುವುದು ಒಬ್ಬ ಗುರು. ಪ್ರತಿಯೊಬ್ಬರಿಗೂ ಶಿಕ್ಷಣ ಹೇಗೆ ಮುಖ್ಯವೋ, ಹಾಗೇಯೆ ಆ ಶಿಕ್ಷಣ ನೀಡುವ ಗುರುವು ಅಷ್ಟೇ ಮುಖ್ಯ. ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟು ಹಾಕುವ ಸೂತ್ರಧಾರನೇ ಶಿಕ್ಷಕ ಎಂದರೆ ತಪ್ಪಾಗಲಾರದು ಎಂದರು.
ಈ ಸಂದರ್ಭದಲ್ಲಿ ಎಕ್ಸಲೆಂಟ್ ಮತ್ತು ಲಿಟ್ಲ್ ಸ್ಟಾರ್ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕಿಯರನ್ನು ಗೌರವಿಸಲಾಯಿತು. ವಿಶೇಷವಾಗಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ, ರಾಷ್ಟ್ರೀಯ ಅತ್ಯುತ್ತಮ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಸ್ತಿ ಪುರಸ್ಕೃತರಾದ ಶೇಡಿಮನೆ ಗೋಪಾಲ ಶೆಟ್ಟಿ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಜ್ಞಾನ್ ಎಜ್ಯಕೇಶನಲ್ ಟ್ರಸ್ಟ್ ನ ಅಧ್ಯಕ್ಷ ರಮೇಶ್ ಶೆಟ್ಟಿ ವಹಿಸಿದ್ದರು. ಸುಜ್ಜಾನ್ ಎಜ್ಯಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಶುಂಪಾಲರಾದ ಅಗಸ್ಟಿನ್ ಕೆ.ಎ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಪ್ರೀತಿ ಸ್ವಾಗತಿಸಿ, ರಜತ್ ಭಟ್ ವಂದಿಸಿದರು.