ಉಡುಪಿ, ಸೆ 12 (DaijiworldNews/SM): ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಯಲ್ಲಿ ಪರಿಸರಕ್ಕೆ ಮಾರಕವಾಗುವ ಗಣೇಶ ವಿಗ್ರಹಗಳನ್ನು ಬಳಸದಂತೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚಿಸಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿರುವ ಗಣಪತಿ ವಿಗ್ರಹಗಳ ತಯಾರಿಕಾ ಘಟಕ ಹಾಗೂ ಮಾರಾಟ ಮಾಡುವ ಮಳಿಗೆಗಳನ್ನು ಪರಿವೀಕ್ಷಿಸಿದಾಗ ನಿಷೇಧಿತ ಪದಾರ್ಥ ಪ್ಲಾಸ್ಟರ್ಆಫ್ ಪ್ಯಾರಿಸ್ ನಿಂದ ವಿಗ್ರಹಗಳನ್ನು ತಯಾರಿಸುತ್ತಿರುವುದು ಹಾಗೂ ಅವುಗಳನ್ನು ಹಾಗೂ ಬಣ್ಣ ಲೇಪಿತವಾದ ವಿಗ್ರಹಗಳನ್ನು ಮಾರಾಟಕ್ಕೆಇಟ್ಟಿರುವುದನ್ನು ಗಮನಕ್ಕೆ ಬಂದಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ಲಾಸ್ಟರ್ಆಫ್ ಪ್ಯಾರಿಸ ಉಪಯೋಗಿಸಿ ತಯಾರಿಸುತ್ತಿರುವ ವಿಗ್ರಹಗಳು ಬಣ್ಣ ಲೇಪಿತವಾದ ಹಾಗೂ ಈಗಾಗಲೇ ತಯಾರಿಸಿ ಅಥವಾ ಇತರೆ ರಾಜ್ಯಗಳಿಂದ ಅಮದು ಮಡಿಕೊಂಡು ಮಾರಾಟಕ್ಕೆಇಟ್ಟಿರುವ ನಿಷೇಧಿತ ವಿಗ್ರಹಗಳನ್ನು ವಶಕ್ಕೆ ತೆಗೆದುಕೊಳ್ಳಬೇಕು. ಅವುಗಳನ್ನು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿ, ಶೆಡ್ಡರ್ ಗಳನ್ನು ಉಪಯೋಗಿಸಿ ಲ್ಯಾಂಡ್ ಫಿಲ್ ಸೈಟ್ನಲ್ಲಿ ವಿಲೇವಾರಿ ಮಾಡಬೇಕೆಂದು ಪೌರಾಯುಕ್ತರು/ ಮುಖ್ಯಾಧಿಕಾರಿಗಳು, ನಗರಸಭೆ/ ಪುರಸಭೆ/ ಪಟ್ಟಣ ಪಂಚಾಯತ್ಇವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ಲಾಸ್ಟರ್ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತ ವಿಗ್ರಹಗಳನ್ನು ತಯಾರಿಸುವ ಹಾಗೂ ಮಾರಾಟ ಮಾಡುವುದನ್ನು ತಡೆಯಲು ಹಾಗೂ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ತಯಾರಿ/ ಮಾರಾಟ ಮಾಡುವ ವ್ಯಕ್ತಿ/ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ. ಈ ಅಧಿಸೂಚನೆಯಂತೆ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಜಿಲ್ಲೆಯಲ್ಲಿಅನುಷ್ಠಾನಗೊಳಿಸಲು ಯೋಜನಾ ನಿರ್ದೆಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ .ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.