ಮಂಗಳೂರು,ಸೆ 12 (DaijiworldNews/AK): ನಗರದ ಕುಲಶೇಖರ ಕೊರ್ಡೆಲ್ ಧರ್ಮಕೇಂದ್ರಕ್ಕೆ ಈಗ 150 ವರ್ಷಗಳ ಸಂಭ್ರಮ. ಪವಿತ್ರ ಶಿಲುಬೆಯ ಆಶ್ರಯದಲ್ಲಿ ಈ ಅವಧಿಯಲ್ಲಿ ಜನತೆ ಪಡೆದ ವರಗಳು ಅಪಾರ. ಈ ಸಂಭ್ರಮಾಚರಣೆಯನ್ನು ಸೆಪ್ಟಂಬರ್ 14 ಹಾಗೂ 17 ರಂದು ಕೃತಜ್ಞತಾ ಬಲಿಪೂಜೆಯೊಂದಿಗೆ ನೆರವೇರಿಸಲು ಹೋಲಿ ಕ್ರಾಸ್ ಧರ್ಮಕೇಂದ್ರವು ನಿರ್ಧರಿಸಿದೆ ಎಂದು ಧರ್ಮಕೇಂದ್ರದ ಪ್ರಧಾನ ಧರ್ಮಗುರು ಫಾ.ಕ್ಲಿಫರ್ಡ್ ಫೆರ್ನಾಂಡಿಸ್ ತಿಳಿಸಿದ್ದಾರೆ.
ಧರ್ಮಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.14 ರಂದು ಸಂಜೆ 5.30 ಕ್ಕೆ ಮಂಗಳೂರು ಧರ್ಮಕ್ಷೇತ್ರದ ಪ್ರಧಾನ ಗುರು ಮ್ಯಾಕ್ಸಿಮ್ ನೊರೊನ್ಹಾ ಅವರು ಕೃತಜ್ಞತಾ ಬಲಿಪೂಜೆಯನ್ನು ನೆರವೇರಿಸುವರು. ಬಳಿಕ ಧರ್ಮಕೇಂದ್ರದಲ್ಲಿ ಸೇವೆ ನೀಡಿದ ಎಲ್ಲ ಮುಖ್ಯಸ್ಥರು, ಕಾರ್ಯದರ್ಶಿಗಳು, ವಾರ್ಡ್ ಮುಖ್ಯಸ್ಥರು ಹಾಗೂ ವಿಶ್ವಾಸಿಗಳು ಹಾಗೂ ಸ್ಥಾಪಕರ ದಿನ ಆಚರಿಸಲಾಗುವುದು ಎಂದು ಹೇಳಿದರು.
ಸೆ.17 ರಂದು ಹಬ್ಬದ ಸಂಭ್ರಮ. ಅಂದು ಸಂಜೆ 5.30 ಕ್ಕೆ ಮಂಗಳೂರು ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ದಾನ್ಹ ಅವರು ಕೃತಜ್ಞತಾ ಬಲಿಪೂಜೆ ಅರ್ಪಿಸುವರು. ಅಂದು ಕೇಂದ್ರದಲ್ಲಿ ಸೇವೆ ಸಲ್ಲಿಸಿದ ಎಲ್ಲ ಧರ್ಮಗುರುಗಳು ಹಾಗೀ ಇತರ ಧಾರ್ಮಿಕ ವ್ಯಕ್ತಿಗಳ ದಿನ ಆಚರಿಸಲಾಗುವುದು.
ಮುಂದಿನ ದಿನಗಳಲ್ಲಿ ಹಿರಿಯ ನಾಗರಿಕರ ದಿನ, ವಿಕಲಚೇತನರ ದಿನ, ಕ್ರೀಡಾ ಕೂಟ, ್ಯಾನ್ಸಿೆಟ್, ಅನಿವಾಸಿ ಭಾರತೀಯರ ದಿನ, ಧರ್ಮ ಕೂಟ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.
1865 ರಿಂದ 1877 ತನಕ ಮಿಲಾಗ್ರಿಸ್ ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳಾಗಿದ್ದ ವಂ.ಅಲೆಕ್ಸಾಂಡರ್ ದ್ಯೂಬ್ವಾ (್ರಾದ್ ಸ್ವಾಮಿ) ಅವರು ತನ್ನ ಧರ್ಮ ಕೇಂದ್ರದ ವ್ಯಾಪ್ತಿಯ ಕುಲಶೇಖರದಲ್ಲಿ ಒಂದು ಸ್ವತಂತ್ರ ಧರ್ಮಕೇಂದ್ರ ಆರಂಭಿಸುವ ಉದ್ದೇಶದಿಂದ 1873, ಸೆಪ್ಟಂಬರ್ 14 ರಂದು ಇಲ್ಲಿ ದೇವಾಲಯಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಶಿಲಾನ್ಯಾಸ ಬಳಿಕ ಶಿಲುಬೆಯನ್ನು ನೆಟ್ಟು ಈ ದೇವಾಲಯವನ್ನು ಪವಿತ್ರ ಶಿಲುಬೆಗೆ ಸಮರ್ಪಿಸಿ ಧರ್ಮಕೇಂದ್ರಕ್ಕೆ ಕೊರ್ಡೆಲ್ ಎಂದು ನಾಮಕರಣ ಮಾಡಿದ್ದರು ಎಂದು ಅವರು ಹೇಳಿದರು.
ಪ್ರಸ್ತುತ ಕೊರ್ಡೆಲ್ ಧರ್ಮಕೇಂದ್ರದಲ್ಲಿ 2000 ಕ್ಕೂ ಅಧಿಕ ಕುಟುಂಬಗಳು ಹಾಗೂ 8000 ಕ್ಕೂ ಅಧಿಕ ವಿಶ್ವಾಸಿಗಳು ಇದ್ದಾರೆ ಎಂದು ಅವರು ತಿಳಿಸಿದರು.
ಧರ್ಮಕೇಂದ್ರದ ಪಾಲನಾ ಸಮಿತಿ ಉಪಾಧ್ಯಕ್ಷೆ ರೂತ್ ಕ್ಯಾಸ್ಟಲಿನೊ, ಕಾರ್ಯದರ್ಶಿ ಅನಿಲ್ ಡೇಸಾ, ಪ್ರಚಾರ ಸಮಿತಿ ಸಂಯೋಜಕ ಡಾ.ಲವಿನಾ ಡಿಮೆಲ್ಲೊ, ಮಾಧ್ಯಮ ಸಂಯೋಜಕ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.