ಕುಂದಾಪುರ, ಸೆ 12 (DaijiworldNews/MS): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ 100 ದಿನದಲ್ಲಿ 175 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅತ್ಯಂತ ಶೋಚನೀಯ. ಈ ಹಿಂದೆ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಹಲವಾರು ರೈತ ಪರ ಯೋಜನೆ ರದ್ದುಪಡಿಸಿ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಪ್ರವೀಣ್ ಶೆಟ್ಟಿ ಹೇಳಿದರು.
ಸೋಮವಾರ ಸಂಜೆ ಇಲ್ಲಿನ ಶಾಸ್ತ್ರೀವೃತ್ತದಲ್ಲಿ ರಾಜ್ಯ ಸರಕಾರದ ರೈತ ವಿರೋಧಿ ನಿಲುವು ಖಂಡಿಸಿ ಬಿಜೆಪಿ ರೈತ ಮೋರ್ಚಾ ಕುಂದಾಪುರ ಮಂಡಲ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕಿಸಾನ್ ಸಮ್ಮಾನ್ ನಿಧಿ ಯೋಜನೆ, ರೈತ ವಿದ್ಯಾನಿಧಿ ಯೋಜನೆ, ಭೂಸಿರಿ ಯೋಜನೆ, ಶ್ರಮ ಶಕ್ತಿ ಯೋಜನೆ, ರೈತ ಸಂಪದ ಯೋಜನೆ, ಎಪಿಎಂಸಿ ಕಾನೂನು, ಕೃಷಿಭೂಮಿ ಮಾರಾಟ ಕಾನೂನು, ಜಿಲ್ಲೆಗೊಂದು ಗೋಶಾಲೆ, ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್ ಸಹಿತ ಹಲವಾರು ಹಿಂದಿನ ಬಿಜೆಪಿ ಸರಕಾರದ ಯೋಜನೆ ರದ್ದುಪಡಿಸುವ ಮೂಲಕ ರೈತರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಲಾಗಿದೆ. ಬಿಟ್ಟಿಭಾಗ್ಯಗಳಿಗಾಗಿ ರೈತರ ಜೀವನ ಹದಗೆಡಿಸಿದ ಸರಕಾರ ಕೂಡಲೆ ಅಧಿಕಾರದಿಂದ ಕೆಳಗಿಳಿಯಬೇಕು ಎಂದರು.
ರಾಜ್ಯದಲ್ಲಿ ಬರ ಕಾಡುತ್ತಿದೆ. ಇನ್ನೂ ಬರ ಘೋಷಣೆ ಮಾಡಿಲ್ಲ. ರೈತರ ಪಂಪ್ಸೆಟ್ಗಳಿಗೆ 7 ಗಂಟೆ ಉಚಿತ ವಿದ್ಯುತ್ ಪೂರೈಕೆ ಮಾಡಿಲ್ಲ. ಅನಿಯಮಿತ ವಿದ್ಯುತ್ ಕಡಿತದಿಂದ ಜನಸಾಮಾನ್ಯರು ಸಹ ತೊಂದರೆಗೀಡಾಗಿದ್ದಾರೆ. ಸರಕಾರ ರೈತರ ಬಗ್ಗೆ ಯೋಚಿಸುತ್ತಿಲ್ಲ ಎಂದು ಅವರು ಹರಿಹಾಯ್ದರು.
ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ ಮಾತನಾಡಿ ರೈತ ವಿರೋಧಿ ನಿಲುವು ಖಂಡಿಸಿ ಇಡಿ ರಾಜ್ಯಾದ್ಯಂತ ರೈತರು ಬೀದಿಗಿಳಿದಿದ್ದಾರೆ. ನಮಗೆ ಕುಡಿಯಲು ನೀರಿಲ್ಲ. ಜಲಾಶಯ ಬರಿದಾಗಿದೆ. ಈ ನಡುವೆ ತಮಿಳುನಾಡಿಗೆ ನೀರು ಹರಿಸಿ ರಾಜ್ಯದ ರೈತರನ್ನು ಜೀವಹಿಂಡುವ ಕೆಲಸ ಸರಕಾರ ನಡೆಸುತ್ತಿದೆ. ಬೆಂಗಳೂರಿನಲ್ಲಿ ಟ್ಯಾಕ್ಸಿ, ಕ್ಯಾಬ್ ಚಾಲಕರು ಬೀದಿಗಿಳಿದಿದ್ದಾರೆ. ಇದೊಂದು ರೈತ ವಿರೋಧಿ ಮತ್ತು ಜನವಿರೋಧಿ ಸರಕಾರ ಎಂದು ಅವರು ಟೀಕಿಸಿದರು.
ಶಾಸಕ ಕಿರಣ್ಕುಮಾರ ಕೊಡ್ಗಿ, ಬಿಜೆಪಿ ಮಂಗಳೂರು ಸಹಪ್ರಭಾರಿ ರಾಜೇಶ ಕಾವೇರಿ, ಬಿಜೆಪಿ ರೈತ ಮೋರ್ಚಾ ಕುಂದಾಪುರ ಮಂಡಲ ಅಧ್ಯಕ್ಷ ಸುನಿಲ್ಕುಮಾರ ಶೆಟ್ಟಿ ಹೇರಿಕುದ್ರು, ಮುಖಂಡರಾದ ಕಾಳಾವರ ಸತೀಶ್ ಪೂಜಾರಿ, ಭಾಸ್ಕರ ಬಿಲ್ಲವ ಹೇರಿಕುದ್ರು, ಸುರೇಶ್ ಶೆಟ್ಟಿ ಮೂಡುಗೋಪಾಡಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಬಿ.ಪೈ, ಕುಂದಾಪುರ ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ವಿಜಯ ಪೂಜಾರಿ, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ತಹಸೀಲ್ದಾರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.