ಉಡುಪಿ, ಸೆ 11 (DaijiworldNews/SM): ಜಿಲ್ಲೆಯಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಗಾಬರಿಯಾಗದೆ ಎಚ್ಚರವಹಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಕೇವಲ ಒಂದೇ ವಾರದಲ್ಲಿ 160 ಪ್ರಕರಣಗಳು ಪತ್ತೆಯಾಗಿವೆ. ಕಳೆದ ಕೆಲವು ದಿನಗಳ ಹಿಂದೆ 189 ಪ್ರಕರಣಗಳಿದ್ದರೆ, ಈಗ ಅದರ ಸಂಖ್ಯೆ 350ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದರು. ಜಿಲ್ಲೆಯ ನಗರ ಪ್ರದೇಶಗಳಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಬಿಸಿಲು ಮಳೆಯಿಂದಾಗಿ ಸೊಳ್ಳೆ ಉತ್ಪತಿ ಹೆಚ್ಚಾಗಿ ಜೂನ್ ತಿಂಗಳಿನಿಂದ ಪ್ರಕರಣಗಳು ಜಾಸ್ತಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಡೆಂಗ್ಯೂ ತಡೆಗೆ ಮುನ್ನೆಚ್ಚರಿಕೆ ಅಗತ್ಯ
ಸೊಳ್ಳೆ ಕಚ್ಚದಂತೆ ಸದಾ ಎಚ್ಚರವಹಿಸಬೇಕು. ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಬಹಳ ಉತ್ತಮ. ಸೀನುವಾಗ, ಕೆಮ್ಮುವಾಗ ಕರವಸ್ತ್ರಗಳನ್ನು ಅಡ್ಡಲಾಗಿ ಇಟ್ಟುಕೊಳ್ಳಬೇಕು. ಸೊಳ್ಳೆಗಳು ಕಡಿಯದಂತೆ ನೋಡಿಕೊಳ್ಳಲು ಮೈ ತುಂಬಾ ಬಟ್ಟೆ ಧರಿಸಿ.
ಡೆಂಗ್ಯೂ ಸೋಂಕಿನಿಂದ ಪಾರಾಗಲು ಹೆಚ್ಚಾಗಿ ಗಾಳಿ ಮತ್ತು ಬೆಳಕಿನ ವಾತಾವರಣ ತುಂಬಿರುವ ಪ್ರದೇಶದಲ್ಲಿ ವಾಸ ಮಾಡಬೇಕಾದ ಅವಶ್ಯಕತೆ ಇರುತ್ತದೆ. ಇರುವ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳುವುದರ ಮುಖಾಂತರ ಡೆಂಗ್ಯೂ ಸೊಳ್ಳೆಗಳಿಗೆ ಕಡಿವಾಣ ಹಾಕಬಹುದು.