ಉಡುಪಿ, ಸೆ 11 (DaijiworldNews/SM): ರಾಜ್ಯ ಸರಕಾರದ ಆದೇಶದಂತೆ ಉಡುಪಿ ಜಿಲ್ಲೆಯಲ್ಲಿ ಕೂಡಾ ಸಂವಿಧಾನದ ಪೀಠೀಕೆಯನ್ನು ಓದುವ ಕಾರ್ಯಕ್ರಮವನ್ನು ಸೆಪ್ಟೆಂಬರ್ 15ರಂದು ಆಯೋಜಿಸಲಾಗಿದ್ದು ಸುಮಾರು 5 ಸಾವಿರ ಮಂದಿ ಏಕಕಾಲದಲ್ಲಿ ಈ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಭಾಗವಹಿಸಲಿದ್ದಾರೆ” ಎಂದು ಉಡುಪಿ ಜಿಲ್ಲಾಧಿಕಾರಿ ಡಾಕ್ಟರ್ ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು “ಉಡುಪಿ ಜಿಲ್ಲಾ ಮಟ್ಟದ ಕಾರ್ಯಕ್ರಮವು ಸೆಪ್ಟೆಂಬರ್ 15 ರಂದು ಬೆಳಿಗ್ಗೆ 10 ಗಂಟೆಗೆ ಅಜ್ಜರಕಾಡುವಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಸರಕಾರಿ ಕಚೇರಿ, ಕೈಗಾರಿಕಾ ಕೇಂದ್ರಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಕೂಡಾ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಸಂವಿಧಾನ ಪೀಠಿಕೆಯನ್ನು ಸಾರ್ವಜನಿಕವಾಗಿ ಓದಲಾಗುವುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಘ ಸಂಸ್ಥೆಗಳು, ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿ ಕಾರ್ಯಕ್ರಮದ ಪೋಟೋ ಅನ್ನು ಅಪ್ಲೋಡ್ ಮಾಡಿ ಪ್ರಮಾಣಪತ್ರವನ್ನು ಪಡೆಯಬಹುದು” ಎಂದರು.
“ಕೇಂದ್ರ ಸರಕಾರ ಆಯುಷ್ಮಾನ್ ಭವ ಯೋಜನೆಯಡಿಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 12 ರಂದು ರಾಷ್ಟ್ರಪತಿಗಳು ಉದ್ಘಾಟಿಸಲಿದ್ದು, ಉಡುಪಿ ಜಿಲ್ಲೆಯಲ್ಲಿ ಇದರ ನೇರಪ್ರಸಾರ ಇರಲಿದೆ. ಇದರಡಿಯಲ್ಲಿ ಗ್ರಾಮೀಣ ಮಟ್ಟದಲ್ಲಿ ಆರೋಗ್ಯ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಸಹಕಾರಿ. ಈ ಕಾರ್ಯಕ್ರಮ ಮೂರು ಹಂತದಲ್ಲಿ ನಡೆಯಲಿದೆ” ಎಂದರು.