ಕುಂದಾಪುರ, ಸೆ 11 (DaijiworldNews/MS): ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಸ್ತಿ ಯಾವುದೇ ರೀತಿಯಲ್ಲೂ ಪರಾಧೀನ ಆಗಲು ಬಿಡುವುದಿಲ್ಲ. ಈಗಾಗಲೇ ಕಾರ್ಖಾನೆಯನ್ನು ಗುಜರಿಗೆ ಮಾರಾಟ ಮಾಡುವ ಮೂಲಕ ರೈತರಿಗೆ ಹಾಗೂ ಸರ್ಕಾರಕ್ಕೆ ವಂಚನೆ ಮಾಡಲಾದ ಮೊತ್ತವನ್ನು ವಸೂಲಿ ಆಗಬೇಕು. ಆ ಹಿನ್ನೆಲೆಯಲ್ಲಿ ರೈತ ಸಂಘ ಶಾಸನಬದ್ದವಾಗಿ, ಕಾನೂನಾತ್ಮಕ ಹೋರಾಟ ಮುಂದುವರಿಸಲಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ಬ್ರಹ್ಮಾವರದಲ್ಲಿ ನಡೆದ ಉಡುಪಿ ಜಿಲ್ಲಾ ರೈತ ಸಂಘ (ರಿ.) ದ.ಕ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ (ನಿ.) 14 ಕೋಟಿಗೂ ಮಿಕ್ಕಿ ಹಣವನ್ನು ವಂಚನೆ ಮಾಡಿರುವ ಕುರಿತು ಹೋರಾಟ- ಸಮಾಲೋಚನೆ ಸಭೆಯ ಉದ್ಘಾಟನೆಗೊಳಿಸಿ ಅವರು ಮಾತನಾಡಿದರು.
ದ.ಕ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಆಸ್ತಿ. ಸುಮಾರು 5 ಸಾವಿರ ಸದಸ್ಯರನ್ನು ಹೊಂದಿರುವ ಸಂಸ್ಥೆಯ ಮಹಾಸಭೆಗೆ 50 ಜನರಿಗೆ ನೋಟಿಸು ನೀಡಿದ್ದಾರೆ. ರೈತರ ಹಕ್ಕನ್ನು ಹತ್ತಿಕ್ಕುವ ಕೆಲಸವನ್ನು ಇಲ್ಲಿನ ಆಡಳಿತ ಮಂಡಳಿ ಮಾಡಿದೆ. ಆಡಳಿತ ಮಂಡಳಿ ಚುನಾವಣೆ ಸಂದರ್ಭ 41 ಜನರಿಗಷ್ಟೇ ಮತದಾನದ ಹಕ್ಕು ನೀಡಿ 10 ಜನ ಆಯ್ಕೆಯಾದರು. ರೈತರ ಆಸ್ತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಕಳೆದ ಮಹಾಸಭೆಗೆ ಮುನ್ನ ರೈತ ಸಂಘದ ಮೂಲಕ ರೈತರನ್ನು ಸಂಘದ ಸದಸ್ಯರನ್ನಾಗಿ ಮಾಡಿದೆವು. ಆದರೆ ಈ ವರ್ಷವೂ ಮಹಾಸಭೆಗೆ ನೋಟಿಸು ಕೊಡಲಿಲ್ಲ. ನಮ್ಮ ಕಣ್ಣೇದುರೇ ರೈತರ ಸ್ವತ್ತು ಲೂಟಿ ಆಗುತ್ತಿರುವುದನ್ನು, ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿರುವುದನ್ನು ರೈತ ಸಂಘ ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ. ರೈತರಿಗೆ ನ್ಯಾಯ ಒದಗಿಸುವುದೇ ರೈತ ಸಂಘದ ಉದ್ದೇಶ ಎಂದರು.
ಕಾರ್ಖಾನೆಯ ಗುಜರಿಗಳನ್ನು ಗುತ್ತಿಗೆದಾರರೊಂದಿಗೆ ಶಾಮೀಲು ಮಾಡಿಕೊಂಡು ಸುಮಾರು 14ಕೋಟಿಗೂ ಮಿಕ್ಕಿ ವಂಚನೆ ಮಾಡಿದ್ದಾರೆ. ಇದರಲ್ಲಿ ಜಿಲ್ಲಾ ಮಟ್ಟದಿಂದ ಹಿಡಿದು ರಾಜ್ಯಮಟ್ಟದ ಅಧಿಕಾರಿಗಳು ಶಾಮೀಲಾಗಿದ್ದಾರೆ. ಟೆಂಡರ್ ಪ್ರಕ್ರಿಯೆಯಲ್ಲಿ ಆದ ಭ್ರಷ್ಟಾಚಾರದ ಕುರಿತು ತನಿಖೆ ನಡೆಸುವಂತೆ ಮಾಡಿ ಇದರಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆಡಳಿತ ನಿರ್ದೇಶಕರಾಗಿರುವ ಡಿ.ಆರ್ ಸರ್ಕಾರಕ್ಕೆ ತಲುಪಿಸುವ ವರದಿಯಲ್ಲೂ ಸುಳ್ಳು ಮಾಹಿತಿ ನೀಡಿದ್ದಾರೆ. ಈ ಕುರಿತಾಗಿ ಕಾನೂನು ಹೋರಾಟ ಮಾಡುವುದು ರೈತ ಸಂಘದ ಜವಾಬ್ದಾರಿ ಎಂದು ಅವರು ಹೇಳಿದರು.
ಸಕ್ಕರೆ ಕಾರ್ಖಾನೆಯನ್ನು ಗುಜರಿಗೆ ಹಾಕುವಾಗಲೂ ಕೂಡಾ ಪಾರದರ್ಶಕ ವ್ಯವಸ್ಥೆ ಆಗಲಿಲ್ಲ. ಇ-ಟೆಂಡರ್ ಮಾಡಲು ಮೂಲಸೌಕರ್ಯಗಳ ಕೊರತೆ ಎನ್ನುವ ಉತ್ತರ ಕೊಟ್ಟರು. 14 ಕೋಟಿಗೂ ಮಿಕ್ಕಿ ವಂಚನೆ ಆಗಿರುವುದು ಮಾತ್ರವಲ್ಲದೇ ಈ ಹಗರಣದಲ್ಲಿ ಜಿಲ್ಲಾ ಮಟ್ಟದ ರಾಜ್ಯ ಮಟ್ಟದ ಅಧಿಕಾರಿಗಳು ಶಾಮಿಲಾಗಿದ್ದಾರೆ. ಸರ್ಕಾರದ ಅಧೀನ ಕಾರ್ಯದರ್ಶಿಯವರ ಗಮನಕ್ಕೆ ತಂದರೂ ಕೂಡಾ ಅವರು ಏನೂ ಕೆಲಸ ಮಾಡಲಿಲ್ಲ. ಕೋಟ್ಯಾಂತರ ರೂಪಾಯಿ ಲೂಟಿಯಾಗುತ್ತಿದ್ದರೂ ತನಿಖೆ ಮಾಡಲಾಗದ ವ್ಯವಸ್ಥೆಯಡಿಯಲ್ಲಿ ನಾವಿಂದು ಇದ್ದೇವೆ. ಈಗ ಸಹಕಾರಿ ಸದಸ್ಯೆಗೆ ಮಹಾಸಭೆಗೆ ಆಹ್ವಾನ ಪತ್ರ ನೀಡದಿರುವುದು ವಂಚನೆಯ ಇನ್ನೂಂದು ಮುಖ ಎಂದರು.
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಎಸ್.ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಇವತ್ತು ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ಸ್ಥಳ ಮಾರಾಟವಾಗದೆ ಉಳಿಯಲು ಪ್ರತಾಪಚಂದ್ರ ಶೆಟ್ಟರ ಹೋರಾಟವೇ ಕಾರಣ. ಸಾಮಾನ್ಯ ಹಾಲು ಉತ್ಪಾದಕರ ಸಹಕಾರ ಸಂಘವೊಂದು 5 ಲಕ್ಷ ರೂಪಾಯಿಯಲ್ಲಿ ಕಟ್ಟಡ ಮಾಡಬೇಕಿದ್ದರೆ ಇ-ಟೆಂಡರ್ ಮಾಡಬೇಕು ಎನ್ನುವ ಸರ್ಕಾರ ನಿರ್ದೇಶನವಿದೆ. ಆದರೆ ಕೋಟ್ಯಾಂತರ ರೂಪಾಯಿಯಲ್ಲಿ ಸಕ್ಕರೆ ಕಾರ್ಖಾನೆ ಗುಜರಿಗೆ ಏಲಂ ಹಾಕುವಾಗ ಇ-ಟೆಂಡರ್ ಮಾಡಲು ಸಮಸ್ಯೆ ಎದುರಾಗುತ್ತದೆ. ಎಂದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಮಾತನಾಡಿ, ಕಾರ್ಖಾನೆಯ ಆವರಣದಲ್ಲಿದ್ದ ಮರಗಳ ಮಾರಾಟ ಪ್ರಯತ್ನಕ್ಕೆ ತಾಂತ್ರಿಕ ಸಮಸ್ಯೆ ಬಂದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಕಾರ್ಖಾನೆಯ ಗುಜರಿ ಮಾರಾಟ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿತ್ತು. ಪ್ರಾರಂಭದಲ್ಲಿ ಶಾಸನಬದ್ಧವಾಗಿ ಇ-ಪ್ರಾಕ್ಯುರ್ಮೆಂಟ್ ಟೆಂಡರ್ ಮುಖೇನ ಮಾಡಬೇಕಾಗಿತ್ತು. ಅಥವಾ ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾದ ಸೆಂಟ್ರಲ್ ಸ್ಕ್ರಾಪ್ ಬೋರ್ಡ್ ಮುಖಾಂತರ ವಿಲೇವಾರಿ ಮಾಡಬೇಕಾಗಿತ್ತು. ಆದರೆ ಈ ಆಡಳಿತ ಮಂಡಳಿ ಕಾನೂನುಗಳನ್ನು ಗಾಳಿಗೆ ತೂರಿ ಸ್ವೇಚ್ಚಾಚಾರವಾಗಿ ಸಂಬಂಧಪಟ್ಟ ಇಲಾಖೆಯ ಅನುಮೋಧನೆ ಪಡೆಯದೇ ನಾಲ್ವರ ತಾಂತ್ರಿಕ ಸಮಿತಿ ರಚಿಸಿಕೊಂಡು ಅವರಿಗೆ ಬೇಕಾದಂತೆ ಟೆಂಡರ್ನಲ್ಲಿ ಅತಿ ಹೆಚ್ಚು ಬಿಡ್ಡಿನ ದರ ನಮೂದಿಸಿ ನ್ಯೂ ರಾಯಲ್ ಟ್ರೇಡರ್ಸ್ ಚನ್ನೈ ಅವರಿಗೆ ಅನುಕೂಲವಾಗುವಂತೆ ನೀಡಿರುವುದು ಆಡಳಿತ ಮಂಡಳಿಯ ಸಭಾ ನಡಾವಳಿ ನೋಡಿದಾಗ ಅರಿವಾಗುತ್ತದೆ.
ಕಾರ್ಯಕ್ರಮದಲ್ಲಿ ರೈತ ಸಂಘದ ಉಪಾಧ್ಯಕ್ಷ ರಾಜಾರಾಮ ತಲ್ಲೂರು, ಕೋಶಾಧಿಕಾರಿ ಭೋಜ ಕುಮಾರ್ ಬೆಳಂಜೆ, ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ, ರೈತ ಮುಖಂಡರಾದ ಪ್ರದೀಪ್ ಬಲ್ಲಾಳ್, ದಿನೇಶ ಹೆಗ್ಡೆ, ಶಿವರಾಮ ಶೆಟ್ಟಿ ಮಲ್ಯಾಡಿ, ಸಂಪಿಗೇಡಿ ಸಂಜೀವ ಶೆಟ್ಟಿ, ಬಾಕಿಸಂ ಅಧ್ಯಕ್ಷ ಸೀತಾರಾಮ ಗಾಣಿಗ, ಜಿಲ್ಲಾ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಬಾಬು ಹೆಗ್ಡೆ, ಭುಜಂಗ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ರೈತ ಸಂಘದ ಎಲ್ಲಾ ವಲಯಗಳ ಅಧ್ಯಕ್ಷರು, ಪದಾಧಿಕಾರಿಗಳು, ರೈತ ಮುಖಂಡರು ಉಪಸ್ಥಿತರಿದ್ದರು. ನಿತ್ಯಾನಂದ ಶೆಟ್ಟಿ ಹಾರಾಡಿ ಸ್ವಾಗತಿಸಿದರು. ಉಪನ್ಯಾಸಕ ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.