ಮಂಗಳೂರು, ಸೆ 11 (DaijiworldNews/HR): ಈ ಬಾರಿಯ ಸೆ. 19ರ ಗಣೇಶ ಹಬ್ಬದ ದಿನಕ್ಕೆ ಇರಬೇಕಾದ ರಜೆಯನ್ನು ಸೆ.18ರಂದು ಎಂದು ಸರಕಾರದ ಕ್ಯಾಲೆಂಡರ್ನಲ್ಲಿ ಉಲ್ಲೇಖಿಸಲಾಗಿದ್ದು, ಕರ್ತವ್ಯದ ದಿನದಲ್ಲೇ ಹಬ್ಬ ಆಚರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆ ಅನೇಕ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರ ಪ್ರಕಟಿಸಿದ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಸೆ.18ರಂದು ವರಸಿದ್ಧಿವಿನಾಯಕ ವೃತ ರಜೆ ಎಂದು ತಿಳಿಸಿದ್ದು, ಕರಾವಳಿ ಭಾಗದಲ್ಲಿಯೂ ಗಣೇಶ ಹಬ್ಬ ಸೆ.19ರಂದು ನಡೆಯುವ ಕಾರಣದಿಂದ ರಜೆಯ ವಿಚಾರ ಇದೀಗ ಗೊಂದಲಕ್ಕೆ ಕಾರಣವಾಗಿದೆ.
ದ.ಕ. ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಪೋಷಕರು ಈಗಾಗಲೇ ಶಾಲಾಡಳಿತವನ್ನು ಸಂಪರ್ಕಿಸಿ ಗಣೇಶ ಚತುರ್ಥಿ ರಜೆ ಸೆ.19ರಂದೇ ನೀಡುವಂತೆ ಕೋರಿದ್ದು, ಸಾರ್ವತ್ರಿಕ ರಜೆ ಬದಲಾವಣೆ ಬಗ್ಗೆ ಸರಕಾರವೇ ತೀರ್ಮಾನ ಮಾಡಬೇಕಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.