ಉಡುಪಿ, ಸೆ 10 (DaijiworldNews/MS): ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಅಪಘಾತ ವಿಮಾ ಪರಿಹಾರಕ್ಕೆ ಸಂಬಂಧಪಟ್ಟಂತೆ ಯುನಿವರ್ಸಲ್ ಸೊಂಪೊ ಜನರಲ್ ಇನ್ನುರೆನ್ಸ್ ವಿಮಾ ಸಂಸ್ಥೆ 91 ಲಕ್ಷ ರೂಪಾಯಿ ಪರಿಹಾರವನ್ನು ಲೋಕ ಅದಾಲತ್ನಲ್ಲಿ ರಾಜಿ ಮಾಡಿ ರಾಜಿ ಸಂಧಾನ ಪತ್ರವನ್ನು ಸಲ್ಲಿಸಿತು.
ಪ್ರಕರಣದ ವಿವರ : ಉಡುಪಿ ನಗರಸಭೆಯ ಉದ್ಯೋಗಿಯೋರ್ವರು 2021ರ ಜ.16 ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.
ಮೃತರ ವಾರೀಸುದಾರರು ಮಾನ್ಯ ಉಡುಪಿಯ ಪ್ರಧಾನ ಸಿವಿಲ್ ಜಡ್ಡರ ನ್ಯಾಯಾಲಯ (ಹಿ.ಎ.)ದಲ್ಲಿ ವಿಮಾ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಅಪಘಾತಕ್ಕೊಳಪಟ್ಟ ಸಮಯ ಅಪಘಾತಪಡಿಸಿದ ಕಾರಿನ ವಿಮೆಯು ಯುನಿವರ್ಸಲ್ ಸೊಂಪೊ ಜನರಲ್ ಇನ್ಸುರೆನ್ಸ್ ಸಂಸ್ಥೆಗೆ ಒಳಪಟ್ಟಿತ್ತು.
ವಿಮಾ ಸಂಸ್ಥೆಯು ಸದ್ರಿ ಪ್ರಕರಣವನ್ನು ಸಂಸ್ಥೆಯ ವಕೀಲರಲ್ಲಿ ಅಭಿಪ್ರಾಯ ಪಡೆದು ರಾಜಿ ಯೋಗ್ಯ ಪ್ರಕರಣವೆಂದು ತೀರ್ಮಾನಿಸಿ ಅರ್ಜಿದಾರರಿಗೆ ಶೀಘ್ರ ನ್ಯಾಯ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದೆ. ಅರ್ಜಿದಾರರು ಮತ್ತು ವಿಮಾ ಸಂಸ್ಥೆ ರಾಜಿ ಸಂಧಾನ ಪತ್ರಕ್ಕೆ ಸಹಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಖಾಸಗಿ ವಿಮಾ ಸಂಸ್ಥೆ ಅಪಘಾತ ವಿಮಾ ಪರಿಹಾರ ಪ್ರಕರಣದಲ್ಲಿ ಇಷ್ಟೊಂದು ದೊಡ್ಡಮಟ್ಟದ ಪರಿಹಾರ ಘೋಷಿಸಿರುವುದು ಉಡುಪಿ ಜಿಲ್ಲಾ ಲೋಕ ಅದಾಲತ್ನಲ್ಲಿ ಇದೇ ಮೊದಲ ಪ್ರಕರಣವಾಗಿದೆ ಎಂದು ವಿಮಾ ಸಂಸ್ಥೆಯ ನ್ಯಾಯವಾದಿ ಎಚ್. ಆನಂದ ಮಡಿವಾಳ ತಿಳಿಸಿದ್ದಾರೆ.