ಉಡುಪಿ, ಸೆ 10 (DaijiworldNews/MS): ಹೆಬ್ರಿ ಪರಿಸರದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಸ್ಥಳೀಯರ ನೆರವಿನಿಂದ ರಕ್ಷಿಸಿ, ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಸ್ನೇಹಾಲಯಕ್ಕೆ ಶನಿವಾರ ದಾಖಲಿಸಿದ್ದಾರೆ.
ಸುಮಾರು 55 ವರ್ಷದ ಈ ಮಾನಸಿಕ ಅಸ್ವಸ್ಥ ವ್ಯಕ್ತಿ ಹೊರ ರಾಜ್ಯದವರೆಂದು ಶಂಕಿಸಲಾಗಿದ್ದು, ಮಳೆಗಾಳಿಯೆನ್ನದೆ ತಿರುಗಾಡುತ್ತಾ, ಅದೆಷ್ಟೋ ದಿನಗಳಿಂದ ಸ್ನಾನ ಮಾಡದೆ ಅನಾಗರಿಕ ಬದುಕು ನಡೆಸುತ್ತಿದ್ದರು. ವ್ಯಕ್ತಿಯ ದುರ್ದೆಶೆಯನ್ನು ಗಮನಿಸಿದ ಸ್ಥಳೀಯರಾದ ಶ್ರೀದತ್ತ ಶೆಟ್ಟಿ ಹಾಗೂ ಡಾ.ಭಾರ್ಗವಿ ಐತಾಳ್ ಅವರು ವಿಶು ಶೆಟ್ಟಿ ಅವರನ್ನು ಸಂಪರ್ಕಿಸಿ ವ್ಯಕ್ತಿಯ ರಕ್ಷಣೆ ಹಾಗೂ ಪುನರ್ವಸತಿ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಜೇಸಿ ಸೀನಿಯರ್ ಹೆಬ್ರಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಶ್ರೀದತ್ತ ಶೆಟ್ಟಿ, ಡಾ.ಭಾರ್ಗವಿ ಐತಾಳ್, ನಿಥಿಲ್ ಪ್ರಭು ಚಾರ, ಹೆಬ್ರಿ ಠಾಣಾ ಎಚ್ಸಿ ಶಂಕರ್ ಸಹಕರಿಸಿದರು.
ಮಾನಸಿಕ ಅಸ್ವಸ್ಥ ವ್ಯಕ್ತಿಯ ಪುನರ್ವಸತಿ ಹಾಗೂ ಚಿಕಿತ್ಸೆಗಾಗಿ ವಿಶು ಶೆಟ್ಟಿ ಅವರು ಮಂಜೇಶ್ವರದ ಸ್ನೇಹಾಲಯದ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ಅವರಲ್ಲಿ ವಿನಂತಿಸಿದಾಗ ಅವರು ಆಶ್ರಯ ನೀಡಲು ಒಪ್ಪಿದ್ದಾರೆ. ವಿಶು ಶೆಟ್ಟಿ ಅವರು ಖಾಸಗಿ ವಾಹನದ ಮೂಲಕ ವ್ಯಕ್ತಿಯನ್ನು ಕರೆದೊಯ್ದು ಮಂಜೇಶ್ವರದ ಸ್ನೇಹಾಲಯಕ್ಕೆ ದಾಖಲಿಸಿದ್ದಾರೆ. ವಿಶು ಶೆಟ್ಟಿ ಹಾಗೂ ಮಂಜೇಶ್ವರದ ಸ್ನೇಹಾಲಯದ ಮುಖ್ಯಸ್ಥರ ಮಾನವೀಯ ನೆರವಿಗೆ ಜನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.