ಕಾರ್ಕಳ, ಸೆ 10 (DaijiworldNews/MS): ಬೈಲೂರು-ಎರ್ಲಪ್ಪಾಡಿ ಉಮಿಕಲ್ಲು ಬೆಟ್ಟದಲ್ಲಿ ಸ್ಥಾಪಿಸಿದ ಪರಶುರಾಮ ಮೂರ್ತಿಯ ವಾಸ್ತವ್ಯ ವಿಚಾರ ಮರೆಮಾಚುವ ಪ್ರಯತ್ನವಾಗಿ ಶಾಸಕ ಸುನೀಲ್ ಕುಮಾರ್ ವಿಷಯಾಂತರ ಮಾಡುವುದರೊಂದಿಗೆ ನೂರಾರು ಬಾರಿ ಸುಳ್ಳನ್ನೇ ಸತ್ಯವನ್ನಾಗಿರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ರಾಜಕೀಯ ನಡೆಯಲಿ ಸುಳ್ಳನ್ನೇ ಮನೆ ದೇವರನ್ನಾಗಿ ಮಾಡಿ ಅದನ್ನು ಜನರ ಮನದಲ್ಲಿ ಅಚ್ಚೊತ್ತುವಂತೆ ಮಾಡಿಕೊಂಡಿದ್ದಾರೆ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಪರಶುರಾಮನನ್ನು ನಾವೆಲ್ಲರೂ ದೇವರ ಸ್ಥಾನದಲ್ಲಿ ಮುಂದಿಟ್ಟು ಆರಾಧಿಸುತ್ತೇವೆ. ಅದೊಂದು ಧಾರ್ಮಿಕ ವಿಚಾರ ಎಂಬುವುದು ನಾವೆಲ್ಲರೂ ಒಪ್ಪಿಕೊಳ್ಳಲೇ ಬೇಕಾಗಿದೆ. ಸ್ಥಾಪಿಸಿದ ಪರಶುರಾಮ ಮೂರ್ತಿ ಅಸಲಿಯಾಗಿದೆ ಎಂಬುವುದನ್ನು ಶಾಸಕ ಬಹಿರಂಗ ಸಭೆಯಲ್ಲಿ ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಸ್ಥಾಪಿಸಿದ ಪರಶುರಾಮನ ಮೂರ್ತಿ ನಕಲಿಯಾದಲ್ಲಿ ಸುನೀಲ್ ಕುಮಾರ್ ಅವರು ಗೌರವನ್ವಿತ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದಲೇ ನಿವೃತ್ತಿ ಹೊಂದಲು ತಯಾರಾಗಿದ್ದಾರೆಯೇ ಎಂದು ಸವಾಲು ಹಾಕಿದ್ದಾರೆ.
ಕಾರ್ಕಳ ತಾಲೂಕು ಎರ್ಲಪ್ಪಾಡಿ ಸರ್ವೇ ನಂಬ್ರ 329/1 ರಲ್ಲಿ 1.58 ಎಕರೆ ಜಮೀನನ್ನು ಶ್ರೀ ಪರಶುರಾಮ ಥೀಮ್ ಪಾಕ್ ೯ ನಿರ್ಮಾಣಕ್ಕಾಗಿ ಎರ್ಲಪ್ಪಾಡಿ ಗ್ರಾಮ ಪಂಚಾಯತ್ತಿನ ಹೆಸರಿನಲ್ಲಿ ಕಾಯ್ದಿರಿಸುವ ಬಗ್ಗೆ ಉಲ್ಲೇಖ (1) ರಂತೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಉಲ್ಲೇಖ 2ರ ಪತ್ರದಲ್ಲಿ ಪರಶುರಾಮ ಥೀಮ್ಬಪಾಕ್ ೯ ನಿರ್ಮಾಣಕ್ಕಾಗಿ ಎರ್ಲಪ್ಪಾಡಿ ಗ್ರಾಮ ಪಂಚಾಯತ್ ಹೆಸರಿನಲ್ಲಿ ಕಾಯ್ದಿರಿಸಲು ಕೋರಿರಿವ ಕಾರ್ಕಳ ತಾಲೂಕು ಎರ್ಲಪ್ಪಾಡಿ ಗ್ರಾಮದ ಸರ್ವೇ ನಂಬ್ರ 329 /1ರಲ್ಲಿ 1.58 ಎಕರೆ ಜಮೀನು ಗೋಮಾಳ ಜಮೀನು ಆಗಿದ್ದು, ಗೋಮಾಳ ಜಮೀನು ಅನ್ನು ಪ್ರಸ್ತಾವಿತ ಉದ್ದೇಶಕ್ಕೆ ಮಂಜೂರು ಮಾಡಲು ಅವಕಾಶ ಇರುವುದಿಲ್ಲ. ಆದುದರಿಂದ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ನಿರ್ದೇಶನವನ್ನು ನೀಡಲಾಗಿರುತ್ತದೆ ಆದ್ದರಿಂದ ಉಲ್ಲೇಖ (2) ರ ಸರಕಾರ ಪತ್ರದಲ್ಲಿ ನೀಡಿರುವ ನಿರ್ದೇಶನದಂತೆ ಕ್ರಮ ಕೈಗೊಳ್ಳಲು ತಿಳಿಸಿದೆ ಹಾಗೂ ಈ ಬಗ್ಗೆ ಸೂಕ್ತ ವಿವರಣೆಯೊಂದಿಗೆ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ 2023 ಮೇ 22 ರಂದು ಕಾರ್ಕಳ ತಹಶೀಲ್ದಾರ್ ಅವರಿಗೆ ಪತ್ರ ಬರೆದಿದ್ದರು.
2023 ಮಾರ್ಚ್ 31ರಂದು ಕಂದಾಯ ಇಲಾಖೆಯ ಸರಕಾರದ ಕಾರ್ಯದರ್ಶಿಯಿಂದ ಉಡುಪಿ ಜಿಲ್ಲಾಧಿಕಾರಿ ಬಂದ ಪತ್ರದ ಉಲ್ಲೇಖವಾಗಿ ಜಿಲ್ಲಾಧಿಕಾರಿಯವರು ಮೇಲಿನ ಅದೇಶ ಹೊರಡಿಸಿದ್ದರು.
ಈ ಎಲ್ಲಾ ಬೆಳವಣಿಗೆಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಅಂದಿನ ಇಂಧನ ಸಚಿವ ಸುನೀಲ್ ಕುಮಾರ್ ಮೌನಕ್ಕೆ ಶರಣಾಗಿ ಸತ್ಯವನ್ನು ಕ್ಷೇತ್ರದ ನಾಗರಿಕರ ಮುಂದಿಡಲು ಹಿಂಜರಿದಿದ್ದೇಕೆ ಎಂದು ಮುನಿಯಾಲು ಉದಯಕುಮಾರ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಯಾವುದೇ ಅನುಮೋದನೆ ಇಲ್ಲದೇ ತರಾತುರಿಯಲ್ಲಿ ಚುನಾವಣೆ ದೃಷ್ಠಿಕೋನ ಇಟ್ಟುಕೊಂಡು ಪರಶುರಾಮ ಥೀಮ್ ಪಾಕ್೯ ಸ್ಥಾಪನೆಗೆ ಮುಂದಾಗಿರುವ ಶಾಸಕ ಸುನೀಲ್ ಕುಮಾರ್ ಅವರ ದುಡುಕುತನದ ಪ್ರವೃತ್ತಿಯಿಂದಾಗಿ ಸರಕಾರ ಮಟ್ಟದಲ್ಲಿ ಅಡೆತಡೆ ಉಂಟಾಗಿದೆ ಹೊರತು ಕಾಂಗ್ರೆಸ್ ಪಕ್ಷದ ಅಕ್ಷೇಪ ಅಲ್ಲವೆಂದಿರುವ ಅವರು, ಸರಕಾರದ ಮಟ್ಟದಲ್ಲಿ( ಹಿಂದಿನ ಬಿಜೆಪಿ ರಾಜ್ಯ ಸರಕಾರ) ನಿರ್ದೇಶನ ಇದ್ದರೂ ಅನಧಿಕೃತವಾಗಿ ಕಾಮಗಾರಿ ನಡೆಸುತ್ತಾರೆ ಎಂದಾದರೆ ಕಾನೂನಿಗೆ ಮತ್ತು ಸಂವಿಧಾನಕ್ಕೆ ಅಗೌರವ ಸಲ್ಲಿಸಿದಂತಾಗುತ್ತದೆ.
ಕೋಟ್ಯಾಂತರ ವೆಚ್ಚ ಭರಿಸಿ ಮೂರ್ತಿ ಸಿದ್ಧಪಡಿಸಿದಾಗ ಯಾವುದೇ ಯೋಜನೆ ಯೋಚನೆ ಇಲ್ಲದೇ ಹೋಗಿರುವುದು ಹಾಗೂ ಪರಶುರಾಮ ಮೂರ್ತಿಯ ರಿಯಾಲಿಟಿ ಚೆಕ್ ನಡೆಸುವಂತೆ ನಾಗರಿಕರಿಂದ ಒತ್ತಡ ಹೆಚ್ಚುತ್ತಿದ್ದಂತೆ ಪರಶುರಾಮ ಮೂರ್ತಿ ಬಲಪಡಿಸುವ ಕುಂಟು ನೆಪ ಮುಂದಿಟ್ಟುಕೊಂಡು ಪರಶುರಾಮ ಮೂರ್ತಿಯನ್ನು ಬದಲಾಯಿಸುವ ಹುನ್ನಾರವನ್ನು ಸುನಿಲ್ ಕುಮಾರ್ ನಡೆಸುತ್ತಿದ್ದಾರೆ ಎಂದು ಮುನಿಯಾಲು ಉದಯಕುಮಾರ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಈ ಅಕ್ರಮ ವಿಚಾರವನ್ನು ಗಮನಕ್ಕೆ ತರಲಾಗಿದ್ದು, ಶೀಘ್ರವಾಗಿ ಖುದ್ದು ಸ್ಥಳ ಪರಿಶೀಲಿಸುವ ಭರವಸೆ ನೀಡಿದ್ದಾರೆ.
ವಿವಾದಿತ ಪರಶುರಾಮ ಥೀಮ್ ಪಾಕ್ ೯ ನಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಜಿಲ್ಲಾಡಳಿತವೇ ತಡೆ ನೀಡಿದ ಬಳಿಕವೂ ಕಾಮಗಾರಿ ನಡೆಯುತ್ತಿದೆ ಎಂದರೆ ಏನಾರ್ಥ.
ದೇಶಕ್ಕೆ ಕಾನೂನು ಒಂದಾಗಿದರೆ ಕಾರ್ಕಳಕ್ಕೆ ಮಾತ್ರ ಅದು ಅನ್ವಯ ಆಗುವುದಿಲ್ಲವೇ ಎಂಬ ಯಕ್ಷಪ್ರಶ್ನೆಗಳು ಕಾಡತೊಡಗಿದೆ.
ಅಭಿವೃದ್ಧಿ ಪಡಿಸಿರುವಲ್ಲಿ ಕಾಂಗ್ರೆಸ್ ಮೇಲುಗೈ:
ಅವಿಭಜಿತ ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಕಾಂಗ್ರೆಸ್ ನ ಕೊಡುಗೆ ಅಗ್ರಪಂಕ್ತಿಯದಾಗಿದೆ.
ಶಿಕ್ಷಣ, ಆರೋಗ್ಯ,ಉದ್ಯೋಗ,ಧಾರ್ಮಿಕತೆ ,ರಸ್ತೆ, ಕುಡಿಯುವ ನೀರು, ನೈರ್ಮಲ್ಯ, ಮೂಲ ಸೌಕರ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳು ಗಣನೀಯವಾಗಿ ಅಭಿವೃದ್ಧಿ ಕಂಡಿರುವುದು ಕಾಂಗ್ರೆಸ್ ನ ಅಧಿಕಾರದ ಅವಧಿಯಲ್ಲಿ ಎಂಬುವುದು ಗಮನಾರ್ಹ.
ಕಾನೂನು ಚೌಕಟ್ಟಿನ ಒಳಪಟ್ಟಂತೆ ಅನುದಾನಗಳು ದುರುಪಯೋಗ ಪಡಿಸದೇ ಯೋಜನೆಯೂ ಕಟ್ಟಕಡೆಯ ವ್ಯಕ್ತಿಗೂ ಸಿಗುವ ಪ್ರಯತ್ನಗಳು ಕಾಂಗ್ರೆಸ್ ನದಾಗಿದೆ.
ಸರಕಾರದಿಂದ ಅನುಮೋದನೆ ಸಿಗದೇ ವಿವಿಧ ಇಲಾಖೆಗಳ ಅನುದಾನಗಳನ್ನು ದುರುಪಯೋಗ ಪಡಿಸಿ, ಈ ವಿಚಾರಗಳು ಬಯಲಿಗೆ ಬರುತ್ತಿದ್ದಂತೆ ಯೋಜನೆಯು ತನ್ನದಲ್ಲ, ಕಾರ್ಕಳದ ಜನತೆಯದೆಂದು ಹೇಳಿಕೊಳ್ಳುವ ಮೂಲಕ ಪ್ರಸ್ತುತ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಸರಕಾರದ ವಿರುದ್ಧ ಛೂ ಬಿಡುವ ಪ್ರಯತ್ನವನ್ನು ಶಾಸಕ ಸುನೀಲ್ ಕುಮಾರ್ ಮಾಡುತ್ತಿದ್ದರೆಂದು ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.