ಮಂಗಳೂರು, ಸೆ 09 (DaijiworldNews/MS): ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್. ಎಸ್ ಭೋಸರಾಜು ಅವರು ಸಣ್ಣ ನೀರಾವರಿ ಇಲಾಖೆ ವತಿಯಿಂದ ಹರೇಕಳದಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟು ಕಾಮಗಾರಿಯನ್ನು ವೀಕ್ಷಣೆ ಮಾಡಿದರು.ಕಾಮಗಾರಿಯನ್ನು ಶ್ಲಾಘಿಸಿದ ಅವರು ಅತಿ ಶೀಘ್ರವಾಗಿ ಅಣೆಕಟ್ಟು ಉಪಯೋಗಕ್ಕೆ ಬರುವಂತೆ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಡಿವೈಎಫ್ ಐ ಮುಖಂಡ ಕೆ.ಹೆಚ್ ಹಮೀದ್ ಶೀಘ್ರದಲ್ಲಿ ಗ್ರಾಮಕ್ಕೆ ನೀರು ಪೂರೈಸುವಂತೆ ಮನವಿ ಮಾಡಿಕೊಂಡರು.
ಮುಳುಗಡೆ ಭೀತಿಯ ಹರೇಕಳ ಉಳಿಯ ಭಾಗದಲ್ಲಿ ತಡೆಗೋಡೆ ರಚಿಸುವ ಕುರಿತು ಯೋಜನೆ ರೂಪಿಸಲಾಗುವುದು ಎಂದ ಅವರು ಅಂಬ್ಲಮೊಗರು ಗಟ್ಟಿಕುದ್ರು ಪ್ರದೇಶಕ್ಕೆ ಭೇಟಿ ನೀಡಿ ಉಪ್ಪುನೀರು ತಡೆಗೋಡೆ ನಿರ್ಮಿಸುವ ಕುರಿತು ಯೋಜನೆ ನಡೆಸಿ, ಆದಷ್ಟು ಬೇಗ ಸ್ಥಳೀಯರಿಗೆ ತೊಂದರೆಯಾಗದ ರೀತಿಯಲ್ಲಿ ಅಣೆಕಟ್ಟು ಮೂಲಕ ಗ್ರಾಮಕ್ಕೆ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ತಿನ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ, ಸಣ್ಣ ನೀರಾವರಿಯ ಇಲಾಖೆಯ ಅಭಿಯಂತರು ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.